ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯಷ್ಟು ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ: ಶೀಲಾ ದೀಕ್ಷಿತ್
ಭಯೋತ್ಪಾದನೆ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿಯಷ್ಟು ನಿಷ್ಠುರವಾಗಿರಲಿಲ್ಲ, ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಒಪ್ಪಿದ್ದಾರೆ.
ನವದೆಹಲಿ: ಭಯೋತ್ಪಾದನೆ ವಿರುದ್ಧ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯಂತೆ ಸದೃಢರಾಗಿ ಮತ್ತು ಪ್ರಬಲರಾಗಿರಲಿಲ್ಲ ಎಂಬುದನ್ನು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಒಪ್ಪಿದ್ದಾರೆ.
26/11 ಮುಂಬೈ ದಾಳಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಠಿಣ ಕ್ರಮಗಳನ್ನು ಮನಮೋಹನ್ ಸಿಂಗ್ ತೆಗೆದುಕೊಳ್ಳಲಿಲ್ಲ. ಪುಲ್ವಾಮಾ ದಾಳಿ ಬಳಿಕ ಭಯೋತ್ಪಾದಕರನ್ನು ಸೇದೆಬಡಿಯಲು ಪ್ರಧಾನಿ ಮೋದಿ ಅವರು ದೃಢ ನಿಲುವು ತಾಳಿದರು. ಭಾರತೀಯ ವಾಯು ಸೇನೆ ಪಾಕಿಸ್ತಾನದಲ್ಲಿ ಉಗ್ರರ ಶಿಬಿರಗಳನ್ನು ದ್ವಂಸ ಮಾಡಿತು. ಆದರೆ, ಇದೆಲ್ಲಾ ನಡೆಸಿದ್ದು ರಾಜಕೀಯ ಲಾಭಕ್ಕಾಗಿ ಎಂದು ಮಾಜಿ ಸಿಎಂ ಶೀಲಾ ದೀಕ್ಷಿತ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶೀಲಾ ದೀಕ್ಷಿತ್, "ಭಯೋತ್ಪಾದನೆ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿಯಷ್ಟು ನಿಷ್ಠುರವಾಗಿರಲಿಲ್ಲ, ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮೋದಿ ಇದನ್ನೆಲ್ಲಾ ಮಾಡಿದ್ದು ರಾಜಕೀಯ ಲಾಭಕ್ಕಾಗಿ" ಎಂದಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಾಯುದಾಳಿ ಬಳಿಕ ರಾಷ್ಟ್ರೀಯ ಭದ್ರತೆ ಕುರಿತಾಗಿ ಜನರ ಅಭಿಪ್ರಾಯವೇನು? ಮತ್ತೆ ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶೀಲಾ ದೀಕ್ಷಿತ್, ನಿಮ್ಮ ಪ್ರಕಾರ ರಾಷ್ಟ್ರೀಯ ಸುರಕ್ಷತೆ ಎಂದರೇನು? ಇಂದಿರಾಗಾಂಧಿ ಅಧಿಕಾರವಧಿಯಲ್ಲಿ ರಾಷ್ಟ್ರೀಯ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿರಲಿಲ್ಲ ಎಂಬುದು ನಿಮಗೆ ಅನಿಸಿದೆಯೆ? ಎಂದು ಮರುಪ್ರಶ್ನಿಸಿದರು.
2008ರಲ್ಲಿ ಮುಂಬೈ ದಾಳಿಯ ಬಳಿಕ ಯುಪಿಎ ಸರ್ಕಾರ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲಿಲ್ಲವೇಕೆ? ಎಂದು ವಾಯು ದಾಳಿ ಬಳಿಕ ಪ್ರಧಾನಿ ನರೆಂದರ ಮೋದಿ ಪ್ರಶ್ನಿಸಿದ್ದರು. ಅಂದು ಮುಂಬೈನಲ್ಲಿ ನಡೆದ ದಾಳಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನ 10 ಪ್ರಮುಖ ಸ್ಥಳಗಳನ್ನು ಟಾರ್ಗೆಟ್ ಮಾಡಿ ಪಾಕ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು.