ಬೆಂಗಳೂರು ಬಳಿಕ ಚೆನ್ನೈನಲ್ಲಿ ಬೆಂಕಿ ಅನಾಹುತ: 150ಕ್ಕೂ ಹೆಚ್ಚು ಕಾರುಗಳು ಭಸ್ಮ!
ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಹತ್ತಿರದ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜಿನ ಬಳಿ ಈ ಅವಘಡ ಸಂಭವಿಸಿದೆ.
ಚೆನ್ನೈ: ಬೆಂಗಳೂರಿನ ಯಲಹಂಕ ವಾಯುನೆಲೆಯ ಪಾರ್ಕಿಂಗ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾದ ಬೆನ್ನಲ್ಲೇ ತಮಿಳು ನಾಡಿನ ಚೆನ್ನೈ ಹೊರವಲಯದ ಪೊರುರ್ ನ ಕಾರ್ ಶೆಡ್ ಬಳಿ ಇಂತಹದ್ದೇ ಅಗ್ನಿ ಅವಘಡ ನಡೆದಿದ್ದು, ಸುಮಾರು 150ಕ್ಕೂ ಅಧಿಕ ಕಾರುಗಳು ಬೆಂಕಿಗೆ ಭಸ್ಮವಾಗಿದೆ.
ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಹತ್ತಿರದ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜಿನ ಬಳಿ ಈ ಅವಘಡ ಸಂಭವಿಸಿದ್ದು 10ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾನಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಅಗ್ನಿಶಾಮಕ ಅಧಿಕಾರಿಗಳು, ಈ ಕಾರುಗಳನ್ನು ಖಾಸಗಿ ಕಂಪನಿಯೊಂದು ಕಳೆದ ಒಂದು ವರ್ಷಗಳಿಂದ ಈ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುತ್ತಿದೆ. ಇವುಗಳಲ್ಲಿ ಕೆಲವು ಹೊಸ ಕಾರುಗಳಾಗಿವೆ. ಈಗಾಗಲೇ ಬೆಂಕೀಯನ್ನು ನಿಯಂತ್ರಣಕ್ಕೆ ತರಲಾಗಿದ್ದರೂ ಇನ್ನೂ ಹೊಗೆಯಾಡುತ್ತಿದೆ" ಎಂದು ಹೇಳಿದ್ದಾರೆ.
ಅಗ್ನಿ ಅವಘಡದ ಮಾಹಿತಿ ಪಡೆಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ವಾಹನಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತಂಡಗಳು ಬೆಂಕಿಯನ್ನು ಹತೋಟಿಗೆ ತರುವ ಕಾರ್ಯವನ್ನು ಮಾಡುತ್ತಿವೆ. ಆದರೆ ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.