ಉಗ್ರರಿಗೆ ನೆರಳಾಗಿರುವ ಪಾಕ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಸುಷ್ಮಾ ವಾಗ್ದಾಳಿ
ಪಾಕಿಸ್ತಾನ ಮಾತುಕತೆಗೆ ಪತ್ರ ಬರೆದ ಬೆನ್ನಲ್ಲೇ ನಮ್ಮ ಸೈನಿಕರನ್ನು ಹತ್ಯೆ ಮಾಡಿದೆ. ಈ ಮೂಲಕ ಇಮ್ರಾನ್ ಖಾನ್ ತನ್ನ ಕಪಟ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನ್ಯೂಯಾರ್ಕ್: ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಉಗ್ರರಿಗೆ ಪಾಕಿಸ್ತಾನ ನೆರಳಾಗಿದೆ. 9/11 ಹಾಗೂ 26/11ರ ಭಯೋತ್ಪಾದನಾ ದಾಳಿಗಳು ಈ ಶತಮಾನದ ಶಾಂತಿಗೆ ಭಂಗ ತಂದಿದೆ. ಅಮೇರಿಕಾ ದಾಳಿ ರೂವಾರಿ ಒಸಾಮಾ ಬಿನ್ ಲಾಡನ್ ಸತ್ತರೂ, ಮುಂಬೈ ದಾಳಿ ಮುಖ್ಯ ರೂವಾರಿ ಹಫೀಜ್ ಸಯೀದ್ ಪಾಕಿಸ್ತಾನದ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ವಿರುದ್ಧ ಆರೋಪ ಮಾಡಿದ್ದಾರೆ.
ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡುತ್ತಾ, ಪಾಕಿಸ್ತಾನವನ್ನು ಭಯೋತ್ಪಾದನೆ ಉತ್ಪಾದಿಸಿ, ರಫ್ತು ಮಾಡುವ ರಾಷ್ಟ್ರ ಎಂದ ಸ್ವರಾಜ್, ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಪಾಕಿಸ್ತಾನದ ಪ್ರತಿನಿಧಿಗಳು ಕಳೆದ ವರ್ಷ ನಕಲಿ ಫೋಟೋಗಳನ್ನು ತೋರಿಸಿ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪಾಕ್ ಯತ್ನಿಸುತ್ತಲೇ ಇದೆ. ಪಾಕಿಸ್ತಾನದ ಇಬ್ಬಗೆ ನೀತಿಯಿಂದ ಶಾಂತಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕಿಸ್ತಾನ ಮಾತುಕತೆಗೆ ಪತ್ರ ಬರೆದ ಬೆನ್ನಲ್ಲೇ ನಮ್ಮ ಸೈನಿಕರನ್ನು ಹತ್ಯೆ ಮಾಡಿದೆ. ಈ ಮೂಲಕ ಇಮ್ರಾನ್ ಖಾನ್ ತನ್ನ ಕಪಟ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸುಷ್ಮಾ ಸ್ವರಾಜ್ ಶಾಂತಿ ಮಾತುಕತೆ ನಮ್ಮಿಂದ ಮುರಿದು ಬಿದ್ದಿಲ್ಲ. ಆ ರೀತಿಯ ಹೇಳಿಕೆಗಳು ಶುದ್ಧ ಸುಳ್ಳು. ಮಾತುಕತೆ ಮುರಿದು ಬೀಳಲು ಆ ರಾಷ್ಟ್ರದ ನಡತೆಯೇ ಕಾರಣ ಎಂದು ಸುಷ್ಮಾ ಸ್ವರಾಜ್ ಖಡಕ್ ಆಗಿ ಉತ್ತರಿಸಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದ ವಿಚಾರವನ್ನೂ ಸಹ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಎತ್ತಿಹಿಡಿದರು.