ಕಾಂಗ್ರೆಸ್ಗೆ ಬಿಎಸ್ಪಿ ಶಾಸಕರ ಸೇರ್ಪಡೆ: ಕಾಂಗ್ರೆಸ್ ದಲಿತ ವಿರೋಧಿ ಪಕ್ಷ ಎಂದ ಮಾಯಾವತಿ
ಕಾಂಗ್ರೆಸ್ ಅನ್ನು ದಲಿತ ವಿರೋಧಿ ಪಕ್ಷ ಎಂದು ಕರೆದ ಮಾಯಾವತಿ, ಹಿರಿಯ ಪಕ್ಷವು ಹಿಂದುಳಿದವರ ಹಕ್ಕುಗಳನ್ನು ಕಾಪಾಡುವ ವಿಚಾರದಲ್ಲಿ ಗಂಭೀರವಾಗಿಲ್ಲ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಿದಾರೆ.
ಲಕ್ನೋ: ರಾಜಸ್ಥಾನದ ಎಲ್ಲ ಆರು ಬಿಎಸ್ಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಕೆಂಡಾಮಂಡಲವಾಗಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮಂಗಳವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಯಾವತಿ, "ಬಿಎಸ್ಪಿ ಶಾಸಕರನ್ನು ಬೇಟೆಯಾಡುವ ಮೂಲಕ, ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್ಪಿ ತನ್ನ ಬೇಷರತ್ತಾದ ಬೆಂಬಲವನ್ನು ನೀಡಿದ್ದರೂ ಸಹ ಇದು ನಂಬಿಕೆಯ ಉಲ್ಲಂಘನೆಯಾಗಿದೆ" ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಆದರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವಾಗಲೂ ಅದನ್ನು ಬೆಂಬಲಿಸುವ ಪಕ್ಷಗಳಿಗೆ ಹಾನಿ ಉಂಟುಮಾಡುವ ಹಳೆಯ ತಂತ್ರಗಳಿಗೆ ಮರಳಿದೆ ಎಂದು ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಅನ್ನು ದಲಿತ ವಿರೋಧಿ ಪಕ್ಷ ಎಂದು ಕರೆದ ಮಾಯಾವತಿ, ಹಿರಿಯ ಪಕ್ಷವು ಹಿಂದುಳಿದವರ ಹಕ್ಕುಗಳನ್ನು ಕಾಪಾಡುವ ವಿಚಾರದಲ್ಲಿ ಗಂಭೀರವಾಗಿಲ್ಲ ಎಂದಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳನ್ನು ಕಾಂಗ್ರೆಸ್ ಎಂದಿಗೂ ಬೆಂಬಲಿಲ್ಲ. ದೇಶದ ಮೊದಲ ಕಾನೂನು ಸಚಿವ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತು. ಅವರಿಗೆ ಭಾರ ರತ್ನವನ್ನೂ ನೀಡಲಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಮತ್ತು ದುಃಖಕರ ಸಂಗತಿ" ಎಂದು ಮಾಯಾವತಿ ಕಿಡಿ ಕಾರಿದ್ದಾರೆ. ಹೇಳಿದರು.
ಸೋಮವಾರ ತಡರಾತ್ರಿ ಬಹುಜನ ಸಮಾಜ ಪಕ್ಷದ ಎಲ್ಲಾ ಆರು ಶಾಸಕರಾದ ಸಂದೀಪ್ ಕುಮಾರ್, ರಾಜೇಂದ್ರ ಗುಧಾ, ದೀಪ್ ಚಂದ್, ಲಖನ್ ಸಿಂಗ್, ವಾಜಿಬ್ ಅಲಿ, ಮತ್ತು ಜೋಗಿಂದರ್ ಸಿಂಗ್ ಅವನಾ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಮಾಯಾವತಿ ಕಾಂಗ್ರೆಸ್ ವಿರುದ್ಧ ಈ ವಾಗ್ದಾಳಿ ನಡೆಸಿದ್ದಾರೆ.