ಪಾಕ್ ಡೆಪ್ಯೂಟಿ ಹೈಕಮೀಷನರ್ ಗೆ ಸಮನ್ಸ್ ಜಾರಿ ಮಾಡಿದ ಭಾರತ
ಪಾಕಿಸ್ತಾನದ ಡೆಪ್ಯೂಟಿ ಹೈಕಮೀಷನರ್ ಸೈಯದ್ ಹೈದರ್ ಷಾ ಅವರಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದ್ದು, ಸೌತ್ ಬ್ಲಾಕ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ತಿಳಿಸಿದೆ.
ನವದೆಹಲಿ: ಪಾಕಿಸ್ತಾನ ಹಾಗೂ ಭಾರತದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಡೆಪ್ಯೂಟಿ ಹೈಕಮೀಷನರ್ ಗೆ ಸಮನ್ಸ್ ಜಾರಿ ಮಾಡಿದೆ.
ನಿನ್ನೆ ಭಾರತ ನಡೆಸಿರುವ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಂದು ಬೆಳಿಗ್ಗೆ ಗಡಿ ರೇಖೆಯನ್ನು ಉಲ್ಲಂಘಿಸಿ ಭಾರತದ ಮೇಲೆ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದ ಡೆಪ್ಯೂಟಿ ಹೈಕಮೀಷನರ್ ಸೈಯದ್ ಹೈದರ್ ಷಾ ಅವರಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದ್ದು, ಸೌತ್ ಬ್ಲಾಕ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ತಿಳಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.
ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿದ ಬಳಿಕ ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ಆರೋಪಿಸಿರುವ ಪಾಕಿಸ್ತಾನ, ಅಲ್ಲಿರುವ ಭಾರತ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಭಾರತ, ಪಾಕ್ ಪಾಕ್ ಹೈಕಮೀಷನರ್ ಗೆ ಸಮನ್ಸ್ ನೀಡಿದೆ.
ಈ ಮೂಲಕ ಪಾಕಿಸ್ತಾನದ ಡೆಪ್ಯೂಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಪಾಕಿಸ್ತಾನವು ನಾಪತ್ತೆಯಾಗಿರುವ ಪೈಲಟ್ ಕುರಿತು ಮಾಹಿತಿ ನೀಡಬೇಕೆಂದು ಭಾರತ ವಿದೇಶಾಂಗ ಸಚಿವಾಲಯ ಕೇಳಿದೆ. ಇದೇ ವೇಳೆ ಪುಲ್ವಾಮಾ ದಾಳಿ ಕುರಿತು ಪಾಕ್ ತನ್ನ ನಿಲುವನ್ನೂ ಸಹ ಸ್ಪಷ್ಟಪಡಿಸಲು ಸೂಚಿಸಿದೆ ಎನ್ನಲಾಗಿದೆ.