ಭಾರತೀಯ ಯೋಧನ ಅಪಹರಣ ಸುದ್ದಿ ಸುಳ್ಳು: ರಕ್ಷಣಾ ಸಚಿವಾಲಯ
ಶಸ್ತ್ರಸಜ್ಜಿತ ಉಗ್ರರು ಯೋಧ ಯಾಸೀನ್ ನನ್ನು ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿರುವ ಆತನ ಮನೆಯಿಂದ ಅಪಹರಿಸಿದ್ದಾರೆ ಎಂದು ನಿನ್ನೆ ಸಂಜೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ನಲ್ಲಿ ಭಾರತೀಯ ಸೇನೆಯ ಯೋಧನೊಬ್ಬನನ್ನು ಶುಕ್ರವಾರ ಸಂಜೆ ಉಗ್ರರು ಅಪಹರಿಸಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಆದರೀಗ ಆ ವರದಿ ಸುಳ್ಳು, ಯೋಧ ಸುರಕ್ಷಿತವಾಗಿದ್ದಾನೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.
"ರಜೆಯಲ್ಲಿದ್ದ ಯೋಧ ಮೊಹಮ್ಮದ್ ಯಾಸೀನ್ ನನ್ನು ಬದ್ಗಾಮ್ ಜಿಲ್ಲೆಯ ಕಾಜಿಪೋರಾ ಚಂದೂರಾದಿಂದ ಅಪಹರಿಸಲಾಗಿದೆ ಎಂಬ ಮಾಧ್ಯಮದ ವರದಿಗಳು ಸುಳ್ಳು. ಆಟ ಸುರಕ್ಷಿತವಾಗಿದ್ದಾನೆ. ವದಂತಿಗಳಿಗೆ ಕಿವಿಕೊಡಬೇಡಿ" ಎಂದು ರಕ್ಷಣಾ ಇಲಾಖೆ ಹೇಳಿದೆ.
ಶಸ್ತ್ರಸಜ್ಜಿತ ಉಗ್ರರು ಯೋಧ ಯಾಸೀನ್ ನನ್ನು ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿರುವ ಆತನ ಮನೆಯಿಂದ ಅಪಹರಿಸಿದ್ದಾರೆ ಎಂದು ನಿನ್ನೆ ಸಂಜೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಬಡ್ಗಾಮ್ ಜಿಲ್ಲೆಯ ಕಾಜಿಪೋರಾ ಚಂದೂರಾ ಎಂಬಲ್ಲಿರುವ ಮೊಹಮ್ಮದ್ ಯಾಸೀನ್ ಭಟ್ ಅವರು ತಿಂಗಳ ರಜಾಕ್ಕೆಂದು ತಮ್ಮ ಗ್ರಾಮಕ್ಕೆ ಬಂದಿದ್ದರು. ಆಗ ಅವರನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು.
ಜಮ್ಮು-ಕಾಶ್ಮೀರದ ಲೈಟ್ ಇನ್ಫಂಟ್ರಿ (JAKLI) ಘಟಕಕ್ಕೆ ಯಾಸೀನ್ ಸೇರಿದ್ದು, ಆತನ ರಜೆಯ ಮೇಲೆ ಊರಿಗೆ ತೆರಳಿದ್ದ ಎನ್ನಲಾಗಿದೆ. ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಭೀಕರ ಹತ್ಯಾಕಾಂಡ ಬಳಿಕ ಆ ಗಾಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.