ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರವಾಗಿ ಈಗ ಮತ್ತೊಂದು ಸುತ್ತಿನ‌ ಪತ್ರ ಸಮರ ಆರಂಭವಾಗಿದೆ. ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿರುವ ಮೇಕೆದಾಟು ಯೋಜನೆಗೆ ಸಂಪೂರ್ಣ ಒಪ್ಪಿಗೆ ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದ ಬೆನ್ನಲ್ಲೇ ತಮಿಳುನಾಡು ಪತ್ರ ಸಮರ ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಜಲಸಂಪನ್ಮೂಲ ಇಲಾಖೆ ನೀಡಿರುವ ತಾತ್ವಿಕ ಒಪ್ಪಿಗೆ ಹಿಂಪಡೆಯಿರಿ:
ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಯಾವುದೇ ಕಾರಣಕ್ಕೂ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬೇಡಿ. ಮೇಕೆದಾಟು ಯೋಜನೆಯಿಂದ ನಮ್ಮ ಪಾಲಿನ‌ ನೀರಿಗೆ ಧಕ್ಕೆಯಾಗುತ್ತದೆ. ಈಗಾಗಲೇ ಕೇಂದ್ರ ಜಲಸಂಪನ್ಮೂಲ ಇಲಾಖೆ ನೀಡಿರುವ ತಾತ್ವಿಕ ಒಪ್ಪಿಗೆಯನ್ನೂ ಹಿಂಪಡೆಯಿರಿ. ಈ‌ ಎಲ್ಲಾ ವಿಷಯಗಳನ್ನು ಚರ್ಚೆ ಮಾಡಲು ಕೂಡಲೇ ಸಮಯಾವಕಾಶ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.


ಇನ್ನೊಂದೆಡೆ ತಮಿಳುನಾಡಿನ ರೈತರು ಕೂಡ‌ ಮೇಕೆದಾಟು ಯೋಜನೆಗೆ ವಿರೋಧ‌ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆಗೆ ಪ್ರತಿಯಾಗಿ ತಮಿಳುನಾಡಿನಲ್ಲೂ ಒಂದು ಅಣೆಕಟ್ಟು ಕಟ್ಟಲು ಒತ್ತಡ ಹೇರುತ್ತಿದ್ದಾರೆ. ಕರ್ನಾಟಕದ ಗಡಿಯಲ್ಲಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ರಾಸಿಮನಳ್ ಎಂಬಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಒತ್ತಡ ಹೇರಲೊರಟಿದ್ದಾರೆ.‌ 


ಸೋಮವಾರ ಕೇಂದ್ರ ಜಲ ಆಯೋಗದ ಆಯುಕ್ತ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಅವರನ್ನು ಭೇಟಿ ಮಾಡಿದ ಪಿ.ಆರ್. ಪಾಂಡಿಯನ್ ನೇತೃತ್ವದ ರೈತರ ನಿಯೋಗ ರಾಸಿಮನಳ್ ಎಂಬಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಕೋರಿದೆ.