ಮೀಟೂ ಎಫೆಕ್ಟ್: ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಾಜೀನಾಮೆ
ಮಹಿಳಾ ಪತ್ರಕರ್ತೆಯರಿಂದ ಮೀಟೂ ಲೈಂಗಿಕ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಈಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನವದೆಹಲಿ: ಮಹಿಳಾ ಪತ್ರಕರ್ತೆಯರಿಂದ ಮೀಟೂ ಲೈಂಗಿಕ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಈಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮೀಟೂ ಅಭಿಯಾನದ ಭಾಗವಾಗಿ ಆರೋಪ ಬಂದ ಹಿನ್ನಲೆಯಲ್ಲಿ ಈಗ ಅವರು ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಪ್ರಧಾನಿ ಕಚೇರಿಗೆ ಅವರು ಈಗ ರಾಜಿನಾಮೆ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದಾರೆ ಎಂದು ಫಸ್ಟ್ ಫೋಸ್ಟ್ ವರದಿ ಮಾಡಿದೆ.
ಕೆಲವು ದಿನಗಳ ಹಿಂದೆ ಹಲವು ಮಹಿಳಾ ಪತ್ರಕರ್ತರು ಮೀಟೂ ಅಭಿಯಾನದ ಭಾಗವಾಗಿ ಪತ್ರಕರ್ತ ಮತ್ತು ಕೇಂದ್ರ ಸಚಿವರಾದ ಎಂ.ಜೆ.ಅಕ್ಬರ್ ಮೇಲೆ ಸಾಕಷ್ಟು ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದರು. ಈ ಹಿನ್ನಲೆಯಲ್ಲಿ ಪ್ರತಿ ಪಕ್ಷಗಳು ಸಹಿತ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು, ಆದರೆ ಸರ್ಕಾರ ಮಾತ್ರ ಈ ವಿಚಾರವಾಗಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ. ಈ ವಿಚಾರವಾಗಿ ವಿದೇಶಾಂಗ ಖಾತೆಯ ಸಚಿವೆಯಾಗಿರುವ ಸುಷ್ಮಾ ಸ್ವರಾಜ್ ಅವರಿಗೆ ಪ್ರಶ್ನೆ ಕೇಳಿದಾಗ ಅವರು ಅದಕ್ಕೆ ಉತ್ತರಿಸದೆ ಜಾರಿಕೊಂಡಿದ್ದರು.
ಲೈಂಗಿಕ ಆರೋಪ ಮಾಡಿರುವ ಬಹುತೇಕ ಮಹಿಳಾ ಪತ್ರಕರ್ತೆಯರು ಎಂ.ಜೆ.ಅಕ್ಬರ್ ಅವರು ಸಂಪಾದಕರಾಗಿದ್ದ ವೇಳೆಯಲ್ಲಿ ಅವರ ಬಳಿ ಕೆಲಸ ಮಾಡಿದವರು ಈಗ ಅವರ ಮೇಲೆ ಮೀಟೂ ಅಭಿಯಾನದ ಭಾಗವಾಗಿ ಆರೋಪ ಮಾಡಿದ್ದರು.