ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನ 5 ನೇ ಕಂತನ್ನು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಬಾರಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಾಗಿ ವಿತ್ತ ಸಚಿವರು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಈ ಯೋಜನೆಗೆ ಮುಂಬರುವ ದಿನಗಳಲ್ಲಿ ಹೆಚ್ಚೂವರಿಯಾಗಿ ಸುಮಾರು 40 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಈ ವರ್ಷದ ಆರ್ಥಿಕ ಆಯವ್ಯಯದಲ್ಲಿ ಈ ಯೋಜನೆಗೆ ಸುಮಾರು 61 ಸಾವಿರ ಕೋಟಿ. ರೂಗಳ ಅನುದಾನ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾತನಾಡಿರುವ ವಿತ್ತ ಸಚಿವರು, ಕೊರೊನಾ ಪ್ರಕೋಪದ ಹಿನ್ನೆಲೆಯಲ್ಲಿ ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಗಳಲ್ಲಿ ಅವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸರ್ಕಾರ MGNREGA ಯೋಜನೆಗೆ ಹೆಚ್ಚೂವರಿಯಾಗಿ 40 ಸಾವಿರ ಕೋಟಿ ರೂ. ಅನುದಾನ ನೀಡಲಿದೆ ಎಂದಿದ್ದಾರೆ. ಈ ಅನುದಾನದಿಂದ ಸುಮಾರು 300 ಮಾನವ ದಿನಗಳ ಕೆಲಸ ನಿರ್ಮಾಣಗೊಳ್ಳಲಿದೆ ಎಂದು ಸಿತಾರಾಮನ್ ಹೇಳಿದ್ದಾರೆ.


MGNREGA ಯೋಜನೆಯಡಿ ಕೆಲಸ ಹೆಚ್ಚಾಗುವುದರಿಂದ ಜಲ ಸಂರಕ್ಷಣೆ ಸೇರಿತಂತೆ ಉದ್ಯೋಗದಲ್ಲಿ ಸ್ಥಿರ ಕೆಲಸಗಳು ಲಭ್ಯವಾಗಲಿವೆ. ಇದರ ಅಡಿಯಲ್ಲಿ ಹೆಚ್ಚಿನ ಉತ್ಪಾದನೆ ಕೈಗೊಳ್ಳುವ ಮೂಲಕ ಗ್ರಾಮೀಣ ಅರ್ಥವ್ಯವಸ್ಥೆಗೆ ಹೆಚ್ಚಿನ ಬಲ ಬಂದಂತಾಗಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ತನ್ನ ಹಿಂದಿನ ಬಜೆಟ್ ನಲ್ಲಿ (ಅಂದರೆ ಬಜೆಟ್ 2020-21 ರಲ್ಲಿ) MGNREGA ಯೋಜನೆಗೆ ಸುಮಾರು 61 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದೆ ಎಂದೂ ಕೂಡ ವಿತ್ತಸಚಿವರು ಉಲ್ಲೇಖಿಸಿದ್ದಾರೆ.


ಒಟ್ಟು 7 ಘೋಷಣೆಗಳನ್ನು ಮಾಡಿದ ವಿತ್ತ ಸಚಿವರು
ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಣೆಯ ಐದನೇ ಮತ್ತು ಅಂತಿಮ ಕಂತಿನ ವಿವರಗಳನ್ನು ಹಂಚಿಕೊಂಡ ವಿತ್ತ ಸಚಿವರು ಭಾನುವಾರ 7 ಪ್ರಮುಖ ಪ್ರಕಟಣೆಗಳನ್ನು ಮಾಡಿದ್ದಾರೆ. ಇವುಗಳಲ್ಲಿ ಎಂಎನ್‌ಆರ್‌ಇಜಿಎ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ, ಕೋವಿಡ್ -19 ನಿಂದ ಪ್ರಭಾವಿತವಾದ ವ್ಯವಹಾರಗಳು, ಕಂಪನಿಗಳ ಸುಧಾರಣೆ ಕಾಯ್ದೆ, ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಸಾರ್ವಜನಿಕ ವಲಯದ ಉದ್ಯಮದಲ್ಲಿ ಸುಧಾರಣೆ ಒಳಗೊಂಡಿವೆ.


ಲ್ಯಾಂಡ್, ಲೇಬರ್, ಲಿಕ್ವಿಡಿಟಿ ಮತ್ತು ಲಾ ಮೇಲೆ ಗಮನ ಕೇಂದ್ರೀಕರಿಸಿದ ವಿತ್ತ ಸಚಿವರು
ತಮ್ಮ ಇಂದಿನ ಸುದ್ದಿಗೋಷ್ಠಿಯ ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿರುವ ಕೇಂದ್ರ ವಿತ್ತ ಸಚಿವರು ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಇದೇ ಗುರಿಯನ್ನು ಇಟ್ಟುಕೊಂಡು ಆ ಆರ್ಥಿಕ ಪ್ಯಾಕೇಜ್ ಸಿದ್ಧಪಡಿಸಲಾಗಿದ್ದು, ಕಳೆದ ಎರಡು ದಿನಗಳ ಪ್ರಕಟಣೆಯಲ್ಲಿ ಭೂಮಿ, ವಲಸೆ ಕಾರ್ಮಿಕರು, ದ್ರವ್ಯತೆ ಮತ್ತು ಕಾನೂನನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ತಂತ್ರಜ್ಞಾನವನ್ನು ಬಳಸಿ ಬಡವರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿದೆ. ಇದರಿಂದ ಪ್ರತಿಯೊಬ್ಬರ ಖಾತೆಗೆ ರೂ.2000 ಗಳಂತೆ ಒಟ್ಟು 16,394 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದ್ದು, ಇದು ದೇಶದ ಒಟ್ಟು 8.19 ಕೋಟಿ ರೈತರಿಗೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.