ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಸೇವೆ ಪುನರಾರಂಭಿಸುವ ಮೊದಲು ಪ್ರಮುಖ ಮಾರ್ಗಸೂಚಿಗಳ ಕರಡು ಪ್ರತಿಯನ್ನು ಬಿಡುಗಡೆಗೊಳಿಸಿದೆ. ಮೊದಲ ಹಂತದಲ್ಲಿ, 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ವಿಮಾನಯಾನಕ್ಕೆ ನಿಷೇಧ ವಿಧಿಸಲಾಗಿದೆ.


COMMERCIAL BREAK
SCROLL TO CONTINUE READING

ಇದಲ್ಲದೆ ಪ್ರಯಾಣಿಕರಿಗೆ ಕ್ಯಾಬಿನ್ ನಲ್ಲಿ ಯಾವುದೇ ರೀತಿಯ ಬ್ಯಾಗೇಜ್ ತೆಗೆದುಕೊಂಡು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿಲ್ಲ. ಅಷ್ಟೇ ಅಲ್ಲ ಕೇವಲ ಒಂದು ಚೆಕ್-ಇನ್ ಬ್ಯಾಗ್ ಗೆ ಅವಕಾಶ ಕಲ್ಪಿಸಲಾಗಿದ್ದು, ಅದರ ತೂಕ ಕೂಡ 20 ಕೆ.ಜಿಗೂ ಕಮ್ಮಿ ಇರಬೇಕು ಎಂದು ಸೂಚಿಸಲಾಗಿದೆ.


ವಿವಿಧ ಪಾಲುದಾರರಿಗೆ ಕರಡು SOP ರವಾನಿಸಿದ ಸಚಿವಾಲಯ
ಸಚಿವಾಲಯವು ಪ್ರಸ್ತುತ ವಾಯುಯಾನಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರಾಗಿರುವ ಡಿಜಿಸಿಎ, ವಿಮಾನಯಾನ ಕಂಪನಿಗಳು , ವಿಮಾನ ನಿಲ್ದಾಣ ನಿರ್ವಾಹಕರು ಇತ್ಯಾದಿಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ(SOP)ದ ಕರಡು ಪ್ರತಿಯನ್ನು ಕಳುಹಿಸಿದೆ. ಈ ಎಸ್‌ಒಪಿ ಪ್ರಕಾರ, ಎಲ್ಲಾ ವಿಮಾನಯಾನ ಕಂಪನಿಗಳ ನೌಕರರು ಮತ್ತು ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಪ್ರಯಾಣಿಕರಿಗೆ ಕರೋನಾ ವೈರಸ್‌ ಲಕ್ಷಣ ಕಂಡುಬಂದರೆ ಅಥವಾ ಅವರ ಮೊಬೈಲ್ ನ ಆರೋಗ್ಯ ಸೇತು ಆಪ್ ನಲ್ಲಿ ಹಸಿರು ನಿಶಾನೆ ಕಾಣಿಸದೆ ಹೋದಲ್ಲಿ, ಅಂತವರನ್ನು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎನ್ನಲಾಗಿದೆ.


ಪ್ರಧಾನಿ ಮೋದಿ ಅವರ ಭಾಷಣಕ್ಕೆ ಮುಂಚಿತವಾಗಿ, ಸಚಿವಾಲಯವು ಈ ಕರಡು ಎಸ್‌ಒಪಿ ಪ್ರತಿಯನ್ನು ಕಳುಹಿಸಿದ್ದು, ಲಾಕ್‌ಡೌನ್‌ನ ಮೂರನೇ ಹಂತದ ಬಳಿಕ ವಿಮಾನ ಸೇವೆ ಪುನರಾರಂಭಿಸುವ ಸಂಕೇತ ನೀಡಿದೆ. ಆದರೂ ಕೂಡ ಇದಕ್ಕಾಗಿ, ಯಾತ್ರಿಗಳು ಹಾಗೂ ವಿಮಾನಯಾನ ಸಿಬ್ಬಂದಿಗಳು ಹಲವು ನಿಯಮಗಳನ್ನು ಅನುಸರಿಸಬೇಕಾಗಲಿದೆ 


ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಬೇಕು
ವಿಮಾನದ ಮೂಲಕ ಪ್ರಯಾಣ ನಡೆಸಲು ಬಯಸುವ ಪ್ರಯಾಣಿಕರು ಎರಡು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಬೇಕು. ಜೊತೆಗೆ ವೆಬ್ ಚೆಕ್-ಇನ್ ಮತ್ತು ಥರ್ಮಲ್ ಥರ್ಮಾಮೀಟರ್ ಗಳನ್ನು ಬಳಸಿ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಪರಿಶೀಲನೆ ನಡೆಸಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನೌಕರರು ಕೂಡ ಹಲವಾರು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಲಿದೆ.


ವಿಮಾನಗಳಲ್ಲಿ ಕೆಲಸ ಮಾಡುವ ಕ್ಯಾಬಿನ್ ಸಿಬ್ಬಂದಿ ಮತ್ತು ಕಾಕ್‌ಪಿಟ್ ಸಿಬ್ಬಂದಿ ಕೂಡ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ದೀರ್ಘಕಾಲದವರೆಗೆ ಕರ್ತವ್ಯ ನಿರ್ವಹಿಸಬೇಕಾಗಲಿದೆ. ಇದೇ ವೇಳೆ ಗುರುತಿನ ಚೀಟಿಯನ್ನು ಪರಿಶೀಲಿಸುವ ಮೂಲಕ ಇದನ್ನು ತಪ್ಪಿಸಬಹುದು ಎಂದು ಹೇಳಲಾಗಿದೆ. ಒಂದು ವೇಳೆ ವಿಮಾನದಲ್ಲಿ ಯಾವುದೇ ಪ್ರಯಾಣಿಕ ಅಥವಾ ಸಿಬ್ಬಂದಿಯ ಆರೋಗ್ಯ ಹದಗೆಟ್ಟರೆ, ಕನಿಷ್ಠ ಮೂರು ಸಾಲುಗಳನ್ನು ಖಾಲಿ ಇಡಬೇಕು ಎಂದು ಸಹ ಸೂಚಿಸಲಾಗಿದೆ.


ಆದರೆ, ಮಧ್ಯದ ಸೀಟ್ ಖಾಲಿ ಇರುವ ಕುರಿತು ಯಾವುದೇ ಒಮ್ಮತ ಮೂಡಿಲ್ಲ
ಆದರೆ, ಸಚಿವಾಲಯ ಜಾರಿಗೊಳಿಸಿರುವ ಈ ಕರಡು SOP ಪ್ರತಿಯಲ್ಲಿ ವಿಮಾನದಲ್ಲಿನ ಮಧ್ಯದ ಆಸನವನ್ನು ಖಾಲಿ ಇರಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಡಿಜಿಸಿಎ ಮಧ್ಯಮ ಸೀಟನ್ನು ಖಾಲಿ ಇರಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಭಾನುವಾರ, ಡಿಜಿಸಿಎ ದೆಹಲಿ ವಿಮಾನ ನಿಲ್ದಾಣಕ್ಕೂ ಭೇಟಿ ಕೂಡ ನೀಡಿತ್ತು. ವಿಮಾನ ನಿಲ್ದಾಣವನ್ನು ತೆರೆದ ನಂತರ, ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಕರಡನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಸಿದ್ಧಪಡಿಸಿದೆ, ಸದ್ಯ ಇದನ್ನು ಎಲ್ಲಾ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.


ಈ ನಿಯಮಗಳನ್ನು ಪಾಲಿಸಬೇಕಾಗಲಿದೆ


  • ಎಲ್ಲಾ ವಿಮಾನ ನಿಲ್ದಾಣಗಳ ಮೇಲೆ ಸಾಮಾಜಿಕ ಅಂತರ ನಿಯಮವನ್ನು ಸಂಪೂರ್ಣವಾಗಿ ಪಾಲಿಸಬೇಕು. ಪ್ರಯಾಣಿಕರು ಪರಸ್ಪರ ಒಂದರಿಂದ ಒಂದೂವರೆ ಮೀಟರ್ ಅಂತರ ಕಾಯಬೇಕು.

  • ವಿಮಾನ ನಿಲ್ದಾಣದ ಎಲ್ಲಾ ಪ್ರದೇಶಗಳಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು.

  • ಪ್ರತಿಯೊಬ್ಬರೂ ಫೇಸ್ ಮಾಸ್ಕ್  ಧರಿಸುವುದು ಅನಿವಾರ್ಯವಾಗಿದೆ, ಕೊರೊನಾ ವೈರಸ್ ಲಕ್ಷಣ ಇಲ್ಲದೆ ಇರುವ ಪ್ರಯಾಣಿಕರಿಗೆ ಮಾತ್ರ ನಿಲ್ದಾಣ ಪ್ರವೇಶಿಸಲು ಅನುಮತಿ ನೀಡಲಾಗುವುದು.

  • ಆರಂಭದಲ್ಲಿ ವಿಮಾನ ನಿಲ್ದಾಣಗಳುಶೇ.30ರ  ಸಾಮರ್ಥ್ಯದೊಂದಿಗೆ ಮಾತ್ರ ಕಾರ್ಯನಿರ್ವಹಿಸಲಿವೆ.

  • ನೀವು ಕುಳಿತುಕೊಳ್ಳಬೇಕಾದರೂ ಕೂಡ ಇತರರಿಂದ ಒಂದರಿಂದ ಒಂದೂವರೆ ಮೀಟರ್ ಅಂತರ ಕಾಯ್ದುಕೊಳ್ಳಲು ಮಧ್ಯದ ಆಸನಗಳನ್ನು ಬಿಟ್ಟು ಕುಳಿತುಕೊಳ್ಳಬೇಕು.

  • ಒಳ ಬರುವ ಎಲ್ಲ ಪ್ರಯಾಣಿಕರನ್ನು ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುವುದು. ಯಾವುದೇ ಕರೋನಾದ ವೈರಸ್ ಶಂಕಿತ ಪತ್ತೆಯಾದರೆ, ಪ್ರತಿ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ.

  • ವಿಮಾನ ನಿಲ್ದಾಣ ತೆರೆದ ನಂತರ ಸ್ಪಾ ಮತ್ತು ಮಸಾಜ್ ಕೇಂದ್ರಗಳನ್ನೂ ತೆರೆಯುವ ಯಾವುದೇ ಯೋಜನೆ ಇಲ್ಲ.

  • ಕೆಲವು ರೆಸ್ಟೋರೆಂಟ್‌ಗಳು ಭದ್ರತಾ ಪರಿಶೀಲನೆಯ ನಂತರವೇ ತೆರೆಯಲ್ಪಡುತ್ತವೆ, ಆದರೆ ಅಲ್ಲಿಯೂ ಕೂಡ ಸಾಮಾಜಿಕ ಅಂತರದ ನಿಯಮ ಪಾಲಿಸುವ ಅನಿವಾರ್ಯತೆ ಇದೆ.

  • ವಿಮಾನ ನಿಲ್ದಾಣದಲ್ಲಿ ಮತ್ತು ಬೋರ್ಡಿಂಗ್ ಸಮಯದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ.

  • ಆನ್‌ಲೈನ್ ಬೋರ್ಡಿಂಗ್ ಪಾಸ್ ಅನ್ನು ಉತ್ತೇಜಿಸಲು ಪ್ರಯತ್ನಿಸಲಾಗುವುದು.

  • ಎಲ್ಲಾ ಪ್ರಯಾಣಿಕರು ತಮ್ಮ ಫೋನ್‌ನಲ್ಲಿ ಆರೋಗ್ಯ ಸೇತು ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವುದು ಅನಿವಾರ್ಯವಾಗಿದೆ.