ನವದೆಹಲಿ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರದೇಶದ ಬುಲಂದ್ ಶಹರ್ ನಲ್ಲಿ 14 ವರ್ಷದ ಬಾಲಕಿಯೋರ್ವಳನ್ನು ಒತ್ತೆಯಾಳಾಗಿರಿಸಿ , ಆಕೆಯ ಮೇಲೆ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.


COMMERCIAL BREAK
SCROLL TO CONTINUE READING

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆರೋಪಿಗಳು ಬಾಲಕಿಯ ಸಂಬಂಧಿಕರಾಗಿದ್ದು, ಘಟನೆಯ ವೇಳೆ ಓರ್ವ ಆರೋಪಿ ಅತ್ಯಾಚಾರದ ದೃಶ್ಯಗಳನ್ನು ತನ್ನ ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದು ಅದನ್ನು ವೈರಲ್ ಮಾಡಿದ್ದಾನೆ ಎಂದಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.


ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಾವನ್ನಪ್ಪಿದ ಕೆಲವೇ ಗಂಟೆಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಅವಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಗ್ರಾಮದ ತಮ್ಮ ಇತರ ಮೂವರು ಸಹಪಾಟಿಗಳ ಜೊತೆ ಸೇರಿ ಆಕೆಯನ್ನು ಸಜೀವ ದಹಿಸಿದ್ದರು. ತಾನು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಗಾಗಿ ಸಂತ್ರಸ್ತೆ ನಾಯಾಲಯಕ್ಕೆ ತೆರಳುತ್ತಿದ್ದರು. ಶೇ.90ರಷ್ಟು ಗಾಯಗೊಂಡ ಸಂತ್ರಸ್ತೆಯನ್ನು ಮೊದಲು ಲಖನೌನ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಏರ್ ಲಿಫ್ಟ್ ಮೂಲಕ ದೆಹಲಿಗೆ ಸಾಗಿಸಿ ಅಲ್ಲಿನ ಸಫ್ದರ್ಜಂಗ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು.


ಮಾರ್ಚ್ 2019ರಲ್ಲಿ ಮಹಿಳೆ ಇಬ್ಬರು ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಸದ್ಯ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು , 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.


ಏತನ್ಮಧ್ಯೆ ಎರಡು ವಾರಗಳ ಹಿಂದೆಯಷ್ಟೇ ಹೈದ್ರಾಬಾದ್ ನಲ್ಲಿ ಮಹಿಳಾ ಪಶುವೈದ್ಯೆಯೋರ್ವರು ತಮ್ಮ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ನಾಲ್ವರು ಕಿರಾತಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಮೃತಪಟ್ಟಿದ್ದರು. ಶುಕ್ರವಾರ ಬೆಳಗ್ಗೆ ಹೈದ್ರಾಬಾದ್ ಪೊಲೀಸರು ಶಾದ್ ನಗರ್ ಬಳಿ ಎನ್ಕೌಂಟರ್ ನಡೆಸುವ ಮೂಲಕ ಈ ನಾಲ್ವರು ಆರೋಪಿಗಳನ್ನು ಮಟ್ಟಹಾಕಿದ್ದಾರೆ.