ನಜೀಬ್ ನಾಪತ್ತೆಯಾಗಿ 3 ವರ್ಷ ಕಳೆದರೂ ಸಿಗದ ಸುಳಿವು! ಪುತ್ರನ ಪತ್ತೆಗೆ ಒತ್ತಾಯಿಸಿ ತಾಯಿಯಿಂದ ಪ್ರತಿಭಟನೆ
2016ರ ಅಕ್ಟೋಬರ್ 15ರಂದು ನಜೀಬ್ ನಾಪತ್ತೆಯಾಗಿದರು. ಆದರೆ, ಇದುವರೆಗೂ ಆತನನ್ನು ಹುಡುಕುವಲ್ಲಿ ಕೇಂದ್ರ ಗೃಹ ಇಲಾಖೆ ವಿಫಲವಾಗಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಯುನೈಟೆಡ್ ಎಗೆನೆಸ್ಟ್ ಹೇಟ್(UAH) ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನಜೀಬ್ ತಾಯಿ ನಫೀಸ್ ಒತ್ತಾಯಿಸಿದರು.
ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ 3 ವರ್ಷ ಕಳೆದರೂ ಆತನನ್ನು ಹುಡುಕುವಲ್ಲಿ ಕೇಂದ್ರ ಗೃಹ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಆತನ ತಾಯಿ ಫಾತಿಮಾ ನಫೀಸ್ ಮಂಗಳವಾರ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇವರೊಂದಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬುಲಂದ್‌ಶಹರ್‌ನಲ್ಲಿ ಜನಸಮೂಹದಿಂದ ಕೊಲ್ಲಲ್ಪಟ್ಟ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಪತ್ನಿ ರಜನಿ ಸಿಂಗ್ ಸಾಥ್ ನೀಡಿದರು.
2016ರ ಅಕ್ಟೋಬರ್ 15ರಂದು ನಜೀಬ್ ನಾಪತ್ತೆಯಾಗಿದರು. ಆದರೆ, ಇದುವರೆಗೂ ಆತನನ್ನು ಹುಡುಕುವಲ್ಲಿ ಕೇಂದ್ರ ಗೃಹ ಇಲಾಖೆ ವಿಫಲವಾಗಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಯುನೈಟೆಡ್ ಎಗೆನೆಸ್ಟ್ ಹೇಟ್(UAH) ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನಜೀಬ್ ತಾಯಿ ನಫೀಸ್ ಒತ್ತಾಯಿಸಿದರು.
ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬುಲಂದ್‌ಶಹರ್‌ನಲ್ಲಿ ಜನಸಮೂಹದಿಂದ ಕೊಲ್ಲಲ್ಪಟ್ಟ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಪತ್ನಿ ರಜನಿ ಸಿಂಗ್, ಖ್ಯಾತ ಲೇಖಕಿ ಅರುಂಧತಿ ರಾಯ್, ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ, ವಕೀಲ ಪ್ರಶಾಂತ್ ಭೂಷಣ್, ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಅಪೂರ್ವಾನಂದ್ ಮತ್ತು ನಂದಿತಾ ನರೈನ್ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಲೇಖಕಿ ಅರುಂಧತಿ ರಾಯ್, ಬಾಂಗ್ಲಾದೇಶಿ ಅಕ್ರಮವಾಸಿಗಳ ಹೆಸರಿನಲ್ಲಿ ಅಲ್ಪ ಸಂಖ್ಯಾತರನ್ನು ಹೊರಗಿಡುವ ಉದ್ದೇಶದಿಂದ ಅಸ್ಮಿತೆ ಹೆಸರಿನಲ್ಲಿ ದಾಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆ, ನ್ಯಾಯಾಂಗ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ನಾಶ ಪಡಿಸುತ್ತಿದೆ. ಗುಂಪು ಹಲ್ಲೆ ಮತ್ತು ನಾಪತ್ತೆ ಪ್ರಕರಣಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಮಾತನಾಡಿ, ಇಂದು ವ್ಯಕ್ತಿಗಳ ಮೇಲೆ ಜನಸಾಮೂಹದಿಂದ ಹಲ್ಲೆ ನಡೆಯುತ್ತಿದ್ದರೂ ಪೊಲೀಸರು, ಸರ್ಕಾರ ಯಾವುದೇ ಶಿಕ್ಷೆ ನೀಡುತ್ತಿಲ್ಲ. ಮುಸ್ಲಿಮರ ವಿರುದ್ಧ, ದಲಿತರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ಲಿಂಚಿಂಗ್ ನಡೆಯುತ್ತಿದೆ. ಅದರ ನೇತೃತ್ವವನ್ನು ಖುದ್ದಾಗಿ ಪ್ರಧಾನಿ ಮೋದಿ ವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಪತ್ರಕರ್ತೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, 13 ವರ್ಷದ ಮಗಳಿರುವ ನನಗೆ ನಜೀಬ್ ತಾಯಿ ನೋವು ಅರ್ಥವಾಗುತ್ತೆ. ಈ ಹಿಂದೆ ದಾಬೋಲ್ಕರ್ ಮತ್ತು ಹತ್ಯೆಯಾದಾಗ ನನಗೆ ಅದರ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಆದರೆ, ಕಡೆಗೆ ನನ್ನ ಸಹೋದರಿಯೇ ಬಲಿಯಾದಳು ಎಂದು ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಿಡಿ ಕಾರಿದರು.