ಶಾಸಕರು ಕರೆ ಮಾಡಿ ನಮ್ಮನ್ನು ಬಂಧಮುಕ್ತರನ್ನಾಗಿಸಿ ಎಂದು ಗೋಗರಿಯುತ್ತಿದ್ದಾರೆ: ಅಶೋಕ್ ಗೆಹ್ಲೋಟ್
ಇಡೀ ರಾಜ್ಯದ ಜನರು ರಾಜ್ ಭವನವನ್ನು ಸುತ್ತುವರಿಯಲು ಬಂದರೆ ಅದು ನಮ್ಮ ಜವಾಬ್ದಾರಿಯಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಜೈಪುರ: ಸ್ಪೀಕರ್ ಪರವಾಗಿ ಸಚಿನ್ ಪೈಲಟ್ (Sachin Pilot) ಸೇರಿದಂತೆ ಬಂಡಾಯ ಶಾಸಕರಿಗೆ ನೋಟಿಸ್ ನೀಡುವ ವಿಷಯದಲ್ಲಿ ಪೈಲಟ್ ಗುಂಪಿಗೆ ಇಂದು ಪರಿಹಾರದ ಸುದ್ದಿ ಬಂದಿದೆ. ಈ ಪ್ರಕರಣದಲ್ಲಿ ಯಥಾಸ್ಥಿತಿಗೆ ಹೈಕೋರ್ಟ್ ಆದೇಶಿಸಿದೆ.
ಏತನ್ಮಧ್ಯೆ ಹೋಟೆಲ್ ಫೇರ್‌ಮೌಂಟ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಪತ್ರಿಕಾಗೋಷ್ಠಿ ನಡೆಸಿದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್ ನಾವು ವಿಧಾನಸಭೆಯ ಅಧಿವೇಶನವನ್ನು ಕರೆಯುವಂತೆ ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ ಎಂದು ಹೇಳಿದರು. ಅಲ್ಲದೆ ಶಾಸಕರು ಕರೆ ಮಾಡಿ ನಮ್ಮನ್ನು ಬಂಧಮುಕ್ತರನ್ನಾಗಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದರು.
ಬಿಜೆಪಿ ನಮ್ಮ ಸರ್ಕಾರ ಉರುಳಿಸಲು ಬಯಸುತ್ತಿದೆ. ಆದರೆ ನಮ್ಮ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. ನಾವು ಚಿಂತಿಸುವ ಅಗತ್ಯವಿಲ್ಲ. ಬಿಜೆಪಿಯವರು ಮಧ್ಯಪ್ರದೇಶದಲ್ಲಿ ಮಾಡಿದ ರೀತಿಯಲ್ಲಿಯೇ ರಾಜಸ್ಥಾನದಲ್ಲೂ ಮಾಡಲು ಬಯಸಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ. ಇಡೀ ರಾಜ್ಯದ ಜನರು ರಾಜ್ ಭವನವನ್ನು ಮುತ್ತಿಗೆ ಹಾಕಲು ಬಂದರೆ ಅದು ನಮ್ಮ ಜವಾಬ್ದಾರಿಯಲ್ಲ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.
ಅದೇ ಸಮಯದಲ್ಲಿ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿರುವ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಅಮರಂ ಬಹುಮತ ಸಾಬೀತಿಗೆ ಆದೆಶಿಸಿದಾಗ ಪಕ್ಷ ಸೂಕ್ತ ನಿಲುವನ್ನು ತೆಗೆದುಕೊಳ್ಳಲಿದೆ ಎಂದರು.
ವಾಸ್ತವವಾಗಿ ರಾಜಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ತೆರೆ ಎಳೆಯಲು ಕಾಂಗ್ರೆಸ್ ಬಯಸಿದ್ದು ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರು ಅವಕಾಶ ನೀಡದಿದ್ದರೆ ಶಾಸಕರು ರಾಜ್ ಭವನದ ಹೊರಗೆ ಕುಳಿತು ಧರಣಿ ಮಾಡುವ ತಂತ್ರವನ್ನೂ ಅನುಸರಿಸುವ ಸಾಧ್ಯತೆ ಇದೇ ಎಂದು ಮೂಲಗಳಿಂದ ತಿಳಿದುಬಂದಿದೆ.