ನವದೆಹಲಿ: ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯೇ ನಮಗೆ ಸುಪ್ರೀಂ ಕೋರ್ಟ್ ಇದ್ದಂತೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಮಮಂದಿರ ನಿರ್ಮಾಣಕ್ಕೆ ಈಗ ಪ್ರಶಸ್ತ ಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದಲ್ಲಿ ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ. ನಾವು ರಾಮಮಂದಿರ ನಿರ್ಮಾಣಕ್ಕೆ ಹೋರಾಟ ನಡೆಸುತ್ತಿರುವುದು ಯಾವುದೇ ಲಾಭ, ಹೆಸರಿಗಾಗಿ ಅಲ್ಲ. ಈ ದೇಶ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಿದೆ. ನಮಗೆ ನರೇಂದ್ರ ಮೋದಿಯೇ ಸುಪ್ರೀಂಕೋರ್ಟ್​" ಎಂದು ಹೇಳಿದ್ದಾರೆ.


ಅಯೋಧ್ಯೆಯಲ್ಲಿ ಮಹಾ ರಾಮ ಮಂದಿರ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎಂದ ಸಂಜಯ್ ರಾವತ್, "ರಾಮ ಮಂದಿರ ಹೆಸರಿನಲ್ಲಿ ಬಿಜೆಪಿಗೆ ಪ್ರತಿವರ್ಷ ಮತ ಕೇಳಲು ಸಾಧ್ಯವಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ರಾಮ್ ಲಾಲ್ಲಾ ಅವರ ಆಶೀರ್ವಾದವಾಗಿದೆ" ಎಂದು ಹೇಳಿದರು.


ಇದೇ ವೇಳೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನಿಡುವ ವಿಚಾರ ಪ್ರಸ್ತಾಪಿಸಿದ ರಾವತ್, ಜೂನ್ 16ರಂದು ಉದ್ಧವ್ ಠಾಕ್ರೆ ಹಾಗೂ ಪಕ್ಷದ ಸಂಸದರೆಲ್ಲರೂ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮಲಲ್ಲಾ ಗೆ ನಮನ ಸಲ್ಲಿಸಲಿದ್ದಾರೆ ಎಂದರು.