ಬೆಂಗಳೂರು: ಶನಿವಾರದಂದು ಸೇಲಂ-ಚೆನ್ನೈ ಎಕ್ಸ್ಪ್ರೆಸ್ ವೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರನ್ನು ಭೇಟಿ ಮಾಡಲು ಹೋಗಿದ್ದ ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರ ಜೊತೆ ಅಲ್ಲಿನ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವರ ಮೊಬೈಲ್ ಪೋನ್ ನ್ನು ಕಿತ್ತುಕೊಂಡು ಬಂಧಿಸಿ ಆನಂತರ  ಬಿಡುಗಡೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಾಹಿತಿ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ನಾಯಕರು ಆದ ದೇವನೂರು ಮಹಾದೇವ ಅವರು ಪ್ರಸ್ತಕ ಸರ್ಕಾರದ ನಿಲುವಿನ ವಿರುದ್ದ ಮತ್ತು ಸೇಲಂ- ಚೆನ್ನೈ ಎಕ್ಸ್ಪ್ರೆಸ್ ವೆ ಯೋಜನೆಯನ್ನು ವಿರೋಧಿಸಿ ಇಂದು ನೀಡಿರುವ ಪೂರ್ಣ ಪತ್ರಿಕಾ ಪ್ರಕಟಣೆ.  


COMMERCIAL BREAK
SCROLL TO CONTINUE READING

"ನಮ್ಮ ಸಮುದಾಯದ ಗ್ರಹಿಕೆಯಿಂದ ಈ ಕೆಲವು ಮಾತುಗಳನ್ನಾಡುತ್ತಿರುವೆ. ಒಬ್ಬ ಕೊಲೆಗಾರ ನೇರವಾಗಿ ಕೊಲೆ ಮಾಡುವುದಕ್ಕೆ ಬಂದರೆ ಅದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಅದನ್ನ ಪ್ರತಿಭಟಿಸಲೂಬಹುದು. ಆದರೆ ಅದೇ ಕೊಲೆಗಾರ ಮಾರುವೇಷದಲಿದ್ದರೆ ತಪ್ಪಿಸಿಕೊಳ್ಳೋಕೆ ಕಷ್ಟ ಆಗುತ್ತೆ. ಈಗ ಇಂಥದೇ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಈ ಹಿಂದೆ ಇಂದಿರಾಗಾಂಧಿ ಅವರು ಜಾರಿ ಮಾಡಿದ ತುರ್ತು ಪರಿಸ್ಥಿತಿ ನೇರವಾಗಿತ್ತು. ಅದು ಕಾಣುವಂತೆ ಇತ್ತು. ಅದರಿಂದ ಅದನ್ನ ಪ್ರತಿಭಟಿಸಬಹುದಾಗಿತ್ತು. ಅದರ ಎದುರು ಸಂಘಟನೆ ಮಾಡಬಹುದಾಗಿತ್ತು. ಅದರಿಂದ ಬೇಗ ಹೊರಬರುವ ಸಾಧ್ಯತೆ ಹೆಚ್ಚಾಗಿತ್ತು. ಈಗ ಇರೋದು ಕೂಡ ತುರ್ತು ಪರಿಸ್ಥಿತಿನೇ. ಹೆಸರಿಲ್ಲ ಅಷ್ಟೇ. ಇದು ಮಾರುವೇಷದ ತುರ್ತು ಪರಿಸ್ಥಿತಿ. ಇದನ್ನ 'ಗೋಮುಖ ವ್ಯಾಘ್ರ ತುರ್ತು ಪರಿಸ್ಥಿತಿ' ಅಂತ ಕರೆಯಬಹುದು. ಈ 'ಗೋಮುಖ ವ್ಯಾಘ್ರ ತುರ್ತು ಪರಿಸ್ಥಿತಿ'ಯ ಲಕ್ಷಣವನ್ನು ದೇಶದ ಉದ್ದಗಲಕ್ಕೂ ಇಂದು ಕಾಣುತ್ತಿದ್ದೇವೆ. ಇದಕ್ಕೆ expressway ಒಂದು ಉದಾಹರಣೆ ಅಷ್ಟೇ. ಕಾನೂನನ್ನು ಭಂಗಮಾಡದೇ ನೊಂದವರನ್ನ ಭೇಟಿ ಮಾಡಬೇಕೆಂದ ಯೋಗೇಂದ್ರ ಯಾದವ್, ಲಿಂಗರಾಜು ಮತ್ತು ಬಾಲಕೃಷ್ಣನ್ ಅವರಿಗೆ ಅವಕಾಶ ಕೊಡಲಿಲ್ಲ ಅಂದರೆ ಅರ್ಥ ಏನು? ಇದು 'ಗೋಮುಖ ವ್ಯಾಘ್ರ ತುರ್ತು ಪರಿಸ್ಥಿತಿ'ಯಲ್ಲವೇ?


ಈಗ ಚೆನ್ನೈ- ಸೇಲಂ expressway ಅನಿವಾರ್ಯವಿತ್ತಾ ಎಂದು ನಾವು ಯೋಚಿಸಬೇಕಾಗಿದೆ. ಈಗಾಗಲೇ ಚೆನ್ನೈಯಿಂದ ಸೇಲಂಗೆ ಮೂರು ರಸ್ತೆಗಳು ಇವೆ. ಈ ರೀತಿ ಇರುವಾಗ ಇನ್ನೊಂದು ರಸ್ತೆ ಬೇಕಾಗಿತ್ತಾ? ಈ ಪ್ರಶ್ನೆಯನ್ನು ನಾವು ಎತ್ತ ಬೇಕಾಗಿದೆ. ಈ ಹೊಸ ಯೋಜನೆಯನ್ನು ಕೈಗೊಂಡರೆ ರಸ್ತೆಯ ಮಾರ್ಗದಲ್ಲಿ ಹನ್ನೊಂದು reserved forest ಬರುವುದರಿಂದ ಸಾವಿರಾರು ಮರಗಳು ಧ್ವಂಸವಾಗುತ್ತವೆ. ಕಾಡನ್ನು ಧ್ವಂಸ ಮಾಡಿ ರಸ್ತೆ ಮಾಡೋದು ವಿನಾಶ ಅಲ್ಲವೇ? ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ! ಜೊತೆಗೆ ಭೂಮಿ ಕಳೆದುಕೊಳ್ಳುವ ರೈತರ ಒಪ್ಪಿಗೆನೂ ಇಲ್ಲ. ಕೇಂದ್ರ ಸರಕಾರ ದಬ್ಬಾಳಿಕೆಯಿಂದ ಈ ಯೋಜನೆಯನ್ನು ಮಾಡಲು ಹೊರಟಿದೆ.


ಇದರ ಮರ್ಮವೇನು? ಈ ಹಿನ್ನಲೆಯಲ್ಲಿ ನೋಡುವಾಗ ೧೦,೦೦೦ ಕೋಟಿ ಬಜೆಟ್ನ ಈ ರಸ್ತೆ ಮಾಡುವ ಯೋಜನೆಯಲ್ಲಿ commission ಡೀಲ್ ಹಾಗು ಕಾಡು ನಾಶ ಮಾಡಿ ಟಿಂಬರ್ ವ್ಯವಹಾರ ಮಾಡುವ ಸಂಚಿನ ವಾಸನೆ ಇದೆ. ಎಲ್ಲಿಂದಲೋ ಸಾಲ ತಂದು, ಕಮಿಷನ್ ಹೊಡ್ಕೊಂಡು, ರಸ್ತೆ ಮಾಡಿಕೊಂಡು, ಅರಣ್ಯ ಸಂಪತ್ತನ್ನೂ ನಾಶಮಾಡಿ ಜನಸಾಮಾನ್ಯರ ಮೇಲೆ ಸಾಲದ ಹೊರೆಯನ್ನು ಹಾಕುವುದೇ ಇಂದು ಅಭಿವೃದ್ಧಿ ಅನ್ನಿಸಿಕೊಂಡಿದೆ. ಇಂತಹ ಅಭಿವೃದ್ಧಿ ಕಾರಣಕ್ಕಾಗಿಯೇನೇ ಮೇಘಸ್ಫೋಟ ಸುನಾಮಿ ಸಂಭವಿಸುತ್ತಿವೆ. ಈ ಮೇಘಸ್ಫೋಟ ಸುನಾಮಿ ಕಾರಣಕ್ಕಾಗಿಯೇ ಕೇರಳ ಮತ್ತು ಕೊಡಗಿನಲ್ಲಿ ಮಾಡಿದ so called ಅಭಿವೃದ್ಧಿ ರಸ್ತೆಗಳು ಕೊಚ್ಚಿಕೊಂಡು ನಮ್ಮ ಕಣ್ಮುಂದೆಯೇ ಹೋಗಿವೆ. ಆದರೂ ನಮಗೆ ಬುದ್ಧಿ ಬಂದಿಲ್ಲ. ಈಗಲಾದರೂ ಕೇಂದ್ರ ಸರಕಾರ ಕಷ್ಟ ಪಟ್ಟುಕೊಂಡು ವಿವೇಕ ವಿವೇಚನೆ ಪಡೆದುಕೊಂಡು ಈ ದುರಂತ ಯೋಜನೆಯನ್ನು ಕೈಬಿಡಬೇಕಾಗಿದೆ."


-ದೇವನೂರು  ಮಹಾದೇವ 


ಸ್ವರಾಜ್ ಇಂಡಿಯಾ ಕರ್ನಾಟಕ