ಭಾರತದಾದ್ಯಂತ ಭೀಕರ ಪ್ರವಾಹಕ್ಕೆ 500 ಕ್ಕೂ ಅಧಿಕ ಸಾವು
ಇದುವರೆಗೆ ಭಾರತದಾದ್ಯಂತ ಧಾರಾಕಾರ ಮಳೆ ಮತ್ತು ಪ್ರವಾಹದಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 100 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ನವದೆಹಲಿ: ಇದುವರೆಗೆ ಭಾರತದಾದ್ಯಂತ ಧಾರಾಕಾರ ಮಳೆ ಮತ್ತು ಪ್ರವಾಹದಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 100 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಕಳೆದ ಒಂದು ವಾರದಲ್ಲಿ ಕೇರಳದಿಂದ 91, ಕರ್ನಾಟಕದಿಂದ 54, ಮಹಾರಾಷ್ಟ್ರದಿಂದ 48 ಮತ್ತು ಒಡಿಶಾದಿಂದ 8 ಸಾವುಗಳು ಸಂಭವಿಸಿರುವ ವರದಿಯಾಗಿವೆ. ಜುಲೈ ಮತ್ತು ಆಗಸ್ಟ್ ಮೊದಲ ವಾರದ ನಡುವೆ ಗುಜರಾತ್‌ನಿಂದ ಕನಿಷ್ಠ 98, ಬಿಹಾರದಲ್ಲಿ 123 ಮತ್ತು ಅಸ್ಸಾಂನಲ್ಲಿ 71 ಸಾವುಗಳು ಸಂಭವಿಸಿವೆ. ಇನ್ನೂ ಹಲವಾರು ವ್ಯಕ್ತಿಗಳು ಕಾಣೆಯಾಗಿದ್ದರಿಂದ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಹೆಚ್ಚಿನ ರಾಜ್ಯಗಳಲ್ಲಿ ಪ್ರವಾಹದ ನೀರು ಕಡಿಮೆಯಾಗುತ್ತಿದ್ದರೆ, ಮುಂದಿನ ಐದು ದಿನಗಳಲ್ಲಿ ಹಲವಾರು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಅಪಾಯವಿದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಸಿದೆ.
ಕರ್ನಾಟದಲ್ಲಿ ಕನಿಷ್ಠ 54 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕೃತ ಮಾಹಿತಿ ತಿಳಿಸಿವೆ. ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1,224 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, 3,93,956 ಜನರು ಆಶ್ರಯ ಪಡೆದಿದ್ದಾರೆ. ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಭಾಗದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಹಂಪಿಯಲ್ಲಿ ಸಿಕ್ಕಿಬಿದ್ದ ಪ್ರವಾಸಿಗರನ್ನು ರಕ್ಷಿಸಿದೆ.ಒಟ್ಟು 365 ಜನರನ್ನು ಶಾಂತಿ ಗೆಸ್ಟ್‌ಹೌಸ್ ಮತ್ತು ವಿರೂಪಾಪುರ ಗಡ್ಡಿಗಳಿಂದ ವಿಜಯನಗರ ವಿಮಾನ ನಿಲ್ದಾಣಕ್ಕೆ ಮಿ -17 ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಹೆಚ್) ಮೂಲಕ ವಿಮಾನದಲ್ಲಿ ಸಾಗಿಸಲಾಯಿತು. ಜರ್ಮನಿ, ಫ್ರಾನ್ಸ್, ಯುಎಸ್ಎ, ಪೋಲೆಂಡ್‌ನಿಂದ ಸುಮಾರು 18 ವಿದೇಶಿಯರನ್ನು ಸಹ ರಕ್ಷಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪರಿಹಾರ ಕಾರ್ಯಗಳಿಗಾಗಿ 10,000 ಕೋಟಿ ರೂ.ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.ರಾಜ್ಯದಲ್ಲಿ 50,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಆಗಸ್ಟ್ 16 ರಂದು ನಾನು ಈ ಬಗ್ಗೆ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇನೆ, 10,000 ಕೋಟಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ನಾನು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ" ಎಂದು ಅವರು ಹೇಳಿದ್ದಾರೆ.