Video: ರಸ್ತೆ ದಾಟುವಾಗಲೇ ಪ್ರವಾಹದಲ್ಲಿ ಕೊಚ್ಚಿ ಹೋದ ಬೈಕ್ ಸವಾರ!
ಇಂದು ಭೋಪಾಲ್ ಗೆ 1 ಸೆಂ.ಮೀ ನಿಂದ 2 ಸೆಂ.ಮೀ ಮಳೆ ಮತ್ತು ನಾಳೆ 3 ಸೆಂ.ಮೀ ನಿಂದ 4 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ವಿಜ್ಞಾನಿ ಅಜಯ್ ಶುಕ್ಲಾ ಹೇಳಿದ್ದಾರೆ.
ಖಾರ್ಗೊನ್: ಮಧ್ಯಪ್ರದೇಶದ ಖಾರ್ಗೊನ್‌ನಲ್ಲಿ ಬುಧವಾರ ಬೆಳಿಗ್ಗೆ ಬೈಕಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಸಮೇತ ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಅಲ್ಲಿದ್ದವರು ಬಳಿಕ ಅವರನ್ನು ರಕ್ಷಿಸಿದ್ದಾರೆ. ಈ ಇಡೀ ಘಟನೆ ಅಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈಗಾಗಲೇ ಹವಾಮಾನ ಇಲಾಖೆಯು ಇಂದೋರ್, ಭೋಪಾಲ್ ಮತ್ತು ಜಬಲ್ಪುರ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. "ಮಾನ್ಸೂನ್ ಇನ್ನೂ ಚಂಬಲ್ ಮತ್ತು ಗ್ವಾಲಿಯರ್ ತಲುಪಿಲ್ಲ. ಉಳಿದಂತೆ ಮಧ್ಯಪ್ರದೇಶದ ಬಹುತೇಕ ಭಾಗಗಳು ಮಾನ್ಸೂನ್ ಗೆ ತತ್ತರಿಸಿವೆ. ಈ ಬಾರಿ ಉತ್ತಮ ಹವಾಮಾನವಿದ್ದು, ಇಂದು ಭೋಪಾಲ್ ನಲ್ಲಿ 1 ಸೆಂ.ಮೀ ನಿಂದ 2 ಸೆಂ.ಮೀ ಮಳೆ ಮತ್ತು ನಾಳೆ 3 ಸೆಂ.ಮೀ ನಿಂದ 4 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ವಿಜ್ಞಾನಿ ಅಜಯ್ ಶುಕ್ಲಾ ಹೇಳಿದ್ದಾರೆ.
ಭಾರಿ ಮಳೆಯಿಂದಾಗಿ ಖಾರ್ಗೋನ್ ಜಿಲ್ಲೆಯ ಬುಡಕಟ್ಟು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಧ್ಯಪ್ರದೇಶ ಹೊರತುಪಡಿಸಿ ಉತ್ತರಾಖಂಡ, ಛತ್ತೀಸ್‌ಗಡ, ದಕ್ಷಿಣ ಗುಜರಾತ್, ಕರಾವಳಿ ಕರ್ನಾಟಕ, ಕೇರಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.