ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ಭೀಕರ ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಕುಟುಂಬಗಳ ಉದ್ಯೋಗ ಮತ್ತು ಶಿಕ್ಷಣದ ಜವಾಬ್ದಾರಿ ಹೊರಲು ಸಿದ್ಧವಿರುವುದಾಗಿ ಮುಕೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಸಂಸ್ಥೆ ಘೋಷಿಸಿದೆ. 


COMMERCIAL BREAK
SCROLL TO CONTINUE READING

ಅಪ್ಪನನ್ನು, ಅಣ್ಣನನ್ನು, ಮಗನನ್ನು, ಕಳೆದುಕೊಂಡ 40ಕ್ಕೂ ಹೆಚ್ಚು ಯೋಧರ ಕುಟುಂಬಗಳ ಆಕ್ರಂದನ ದೇಶಾದ್ಯಂತ ಮುಗಿಲುಮುಟ್ಟಿದೆ. ಮನೆಯ ಆಧಾರ ಸ್ತಂಭಗಳಾಗಿದ್ದ ಯೋಧರು ಇಂದು ಇಲ್ಲವಾಗಿರುವುದು ಕುಟುಂಬಗಳು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಸಿಯಲು ಕಾರಣವಾಗಿದೆ. ಇಂಥ ಸಂದರ್ಭದಲ್ಲಿ ದೇಶದ ಟೆಲಿಕಾಂ ದಿಗ್ಗಜ ರಿಲಯನ್ಸ್ ಸಂಸ್ಥೆ, ಯೋಧರ ಕುಟುಂಬಗಳಿಗೆ ನೆರವಾಗಲು ಮುಂದಾಗಿದೆ. 


ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಿಲಯನ್ಸ್ ಸಂಸ್ಥೆ, ಭಾರತದ ಏಕತೆಯನ್ನು  ಛಿದ್ರಗೊಳಿಸಲು ಹಾಗೂ ಮಾನವತೆಗೆ ವಿರುದ್ಧವಾದ ಭಯೋತ್ಪಾದನೆಯ ನಿಗ್ರಹವನ್ನು ತಡೆಯಲು ಯಾವುದೇ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಯೋಧರ ಕುಟುಂಬಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಮಕ್ಕಳ ಶಿಕ್ಷಣದ ಜೊತೆಗೆ ಅವರುಗಳ ಉದ್ಯೋಗದ ಜವಾಬ್ದಾರಿಯನ್ನು ತಾವು ಹೊರಲು ತಯಾರಾಗಿರುವುದಾಗಿ ಹೇಳಿದೆ.



ಅಷ್ಟೇ ಅಲ್ಲದೆ, ದಾಳಿಯಲ್ಲಿ ಗಾಯಗೊಂಡ ಯೋಧರ ಸಂಪೂರ್ಣ ಚಿಕಿತ್ಸೆ ಜವಾಬ್ದಾರಿಯನ್ನೂ ಹೊರುವುದಾಗಿ ಸಂಸ್ಥೆ ತಿಳಿಸಿದ್ದು, ಪ್ರೀತಿಯ ಸೇನಾ ಪಡೆಯ ಯಾವುದೇ ಜವಾಬ್ದಾರಿಯನ್ನು ಸರ್ಕಾರ ವಹಿಸಿದರೂ ಅದನ್ನು ನಿರ್ವಹಿಸಲು ಸಿದ್ಧ ಎಂದು ಸಂಸ್ಥೆ ಹೇಳಿದೆ.