ಕುಸ್ತಿಪಟು, ಶಿಕ್ಷಕನಾಗಿದ್ದ ಮುಲಾಯಂ ಸಿಂಗ್ ಯಾದವ್ ರಾಜಕೀಯ ನಾಯಕನಾಗಿ ಬೆಳೆದಿದ್ದು ಹೇಗೆ..?
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ. ತಮ್ಮ ಸ್ವಂತ ಬಲದ ಮೇಲೆ ರಾಜಕೀಯದಲ್ಲಿ ಉನ್ನತ ಹುದ್ದೆಗೇರಿದ ದೇಶದ ಹಿರಿಯ ತಳಮಟ್ಟದ ನಾಯಕರಾಗಿ ಮುಲಾಯಂ ಸಿಂಗ್ ಯಾದವ್ ದೊಡ್ಡ ಸಾಧನೆ ಮಾಡಿದ್ದಾರೆ.
ನವದೆಹಲಿ: 3 ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಒಮ್ಮೆ ರಕ್ಷಣಾ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್ ಇಂದು ನಿಧನರಾಗಿದ್ದಾರೆ. ತಮ್ಮ ಸ್ವಂತ ಬಲದಿಂದ ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ದೇಶದ ಹಿರಿಯ ತಳಮಟ್ಟದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಹಿಂದುಳಿದ ಜಾತಿಗಳ ದೊಡ್ಡ ನಾಯಕ. ಬಡ ರೈತ ಕುಟುಂಬದಿಂದ ಬಂದು ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ ರಾಜಕಾರಣಿ ಮುಲಾಯಂ ಸಿಂಗ್.
ನೇತಾಜಿ ಎಂದೇ ಖ್ಯಾತರಾಗಿದ್ದ ಮುಲಾಯಂ ಸಿಂಗ್ ಅವರು ಬಾಲ್ಯದಲ್ಲಿ ಕುಸ್ತಿ ಆಡುತ್ತಿದ್ದರು. ಬಾಲ್ಯದಿಂದಲೂ ಅವರು ಕುಸ್ತಿ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದರು. ತನ್ನ ಕಾಲದ ಪ್ರಸಿದ್ಧ ಕುಸ್ತಿಪಟುಗಳನ್ನು ಸುಲಭವಾಗಿ ಸೋಲಿಸಿದ್ದರು. ಕುಸ್ತಿಯಲ್ಲಿ ಮುಲಾಯಂ ಸಿಂಗ್ ಅವರ ಅಚ್ಚುಮೆಚ್ಚಿನ ಬಾಜಿ ‘ಚರಖಾ’(Charkha) ಎಂದು ಹೇಳಲಾಗುತ್ತದೆ. ನಂತರ ಅವರು ರಾಜಕೀಯದಲ್ಲೂ ಅನೇಕ ಅನುಭವಿಗಳನ್ನು ಸೋಲಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಗಾದಿ ಮೇಲೆ ಕುಳಿತರು.
ಸೈಫಾಯಿ ಬಳಿಯ ಕರ್ಹಾಲ್‌ನಲ್ಲಿ ಕುಸ್ತಿಯಲ್ಲಿ ಅವರು ಆಗಿ ಹೆಸರಾಂತ ಕುಸ್ತಿಪಟು ಸರಯುದಿನ್ ತ್ರಿಪಾಠಿ ಅವರೊಂದಿಗೆ ಸ್ಪರ್ಧಿಸಿದ್ದರು ಎಂದು ಹೇಳಲಾಗುತ್ತದೆ. ಸರಯುದಿನ್ ಎತ್ತರದ ವ್ಯಕ್ತಿಯಾಗಿದ್ದರೆ ಮುಲಾಯಂ ಸಿಂಗ್ ಅವರ ಎತ್ತರ ಅವರಿಗಿಂತ ಚಿಕ್ಕದಾಗಿತ್ತು. ಕುಸ್ತಿ ಪ್ರಾರಂಭದಲ್ಲಿಯೇ ಅವರು ಸರಯುದೀನನನ್ನು ಚಿತ್ ಮಾತಿ ಸೋಲಿಸಿದ್ದರು. ಈ ಪಂದ್ಯ ವೀಕ್ಷಿಸಲು ಜಸ್ವಂತ್ ನಗರ ಶಾಸಕ ನಾಥು ಸಿಂಗ್ ಕೂಡ ಹಾಜರಿದ್ದರು. ನಾಥು ಸಿಂಗ್ ಮುಲಾಯಂ ಬಗ್ಗೆ ಸಂತಸಗೊಂಡು ಅವರ ಜೊತೆ ಕೈ ಜೋಡಿಸಿದರು. ಆಗ ಮುಲಾಯಂ ಸಿಂಗ್ ಅವರು ನಾಥು ಸಿಂಗ್‍ರ ಸಂಪರ್ಕಕ್ಕೆ ಬಂದಿದ್ದರು.
ಇದನ್ನೂ ಓದಿ: Big Breaking: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ನಿಧನ
ಅಧ್ಯಾಪಕ ವೃತ್ತಿ
ಮುಲಾಯಂ ಸಿಂಗ್ ತಮ್ಮ ಆರಂಭಿಕ ಶಿಕ್ಷಣವನ್ನು ಸೈಫೈ ಅವರಿಂದ ಪಡೆದರು. ನಂತರ ಆಗ್ರಾದಲ್ಲಿ ಎಂಎ ಮಾಡಿ ಕೆಲಕಾಲ ಶಿಕ್ಷಕರಾದರು. ಮಕ್ಕಳಿಗೆ ಪಾಠ ಮಾಡುತ್ತಲೇ ಸಮಾಜಸೇವೆಯಲ್ಲೂ ಆಸಕ್ತಿ ಬೆಳೆಸಿಕೊಂಡರು. ಆಗ ಬಹಿರಂಗವಾಗಿ ಸಮಾಜವಾದಿ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಂತರ ಶಿಕ್ಷಕ ವೃತ್ತಿ ತೊರೆದು ರಾಜಕೀಯದಲ್ಲಿ ಸಕ್ರಿಯರಾದರು.
ಪ್ರಥಮ ಬಾರಿಗೆ ಶಾಸಕ
1967ರಲ್ಲಿ ಯುಪಿಯಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಜಸ್ವಂತ್ ನಗರದ ಹಾಲಿ ಶಾಸಕ ನಾಥು ಸಿಂಗ್ ಮತ್ತೊಮ್ಮೆ ಟಿಕೆಟ್ ಪಡೆದರೂ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದರು. ತನಗೆ ವಯಸ್ಸು ಜಾಸ್ತಿ ಆಯ್ತು ಹೀಗಾಗಿ ಯುವಕರಿಗೆ ಅವಕಾಶ ನೀಡುವ ಎಂದು ನಾಥು ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದರು. ಯುನೈಟೆಡ್ ಸೋಷಿಯಲಿಸ್ಟ್ ಪಕ್ಷದಿಂದ ಮುಲಾಯಂ ಸಿಂಗ್ ಟಿಕೆಟ್ ಪಡೆದರು. ಅವರ ಪರ ನಾಥು ಸಿಂಗ್ ಚುನಾವಣಾ ಪ್ರಚಾರವನ್ನೂ ನಡೆಸಿದ್ದರು ಎನ್ನಲಾಗಿದೆ. ಮುಲಾಯಂ ಸಿಂಗ್ ಅವರು ರಾಮ್ ಮನೋಹರ್ ಲೋಹಿಯಾ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು. ನಾಥು ಸಿಂಗ್ ಆಶೀರ್ವಾದದಿಂದ ಮೊದಲ ಬಾರಿಗೆ ಶಾಸಕರಾದ ಮುಲಾಯಂ ನಂತರ ಹಿಂತಿರುಗಿ ನೋಡಲೇ ಇಲ್ಲ. 8 ಬಾರಿ ಈ ಕ್ಷೇತ್ರದಿಂದ ಅವರು ಶಾಸಕರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದರು.
55 ವರ್ಷಗಳ ರಾಜಕೀಯ ಜೀವನ
1977ರಲ್ಲಿ ಮುಲಾಯಂ ಸಿಂಗ್ ಮೊದಲ ಬಾರಿಗೆ ಯುಪಿ ಸರ್ಕಾರದಲ್ಲಿ ಸಚಿವರಾದರು. ಅವರು 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007ರವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಜೂನ್ 1, 1996ರಿಂದ ಮಾರ್ಚ್ 19, 1998ರವರೆಗೆ ಎಚ್.ಡಿ.ದೇವೇಗೌಡರ ಸರ್ಕಾರದಲ್ಲಿ ಮುಲಾಯಂ ಸಿಂಗ್ ಅವರು ದೇಶದ ರಕ್ಷಣಾ ಸಚಿವರಾಗಿದ್ದರು. ಮುಲಾಯಂ ಸಿಂಗ್ ಅವರು ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಲೋಕಸಭೆಯ ಸದಸ್ಯರೂ ಆಗಿದ್ದರು. ಪ್ರಸ್ತುತ ಅವರು ಯುಪಿಯ ಮೈನ್‌ಪುರಿ ಸಂಸದರಾಗಿದ್ದರು. 7 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 55 ವರ್ಷಗಳ ರಾಜಕೀಯ ಜೀವನದಲ್ಲಿ 9 ಬಾರಿ ಶಾಸಕರಾಗಿ, 7 ಬಾರಿ ಸಂಸದರಾಗಿ ಆಯ್ಕೆಯಾದ ಏಕೈಕ ನಾಯಕ ಮುಲಾಯಂ ಸಿಂಗ್. ಇಡೀ ದೇಶದಲ್ಲಿ ಮೋದಿ ಅಲೆ ಇದ್ದಾಗ ಅವರು ಅಜಂಗಢ ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದರು.
ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ನಿಧನ: ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿ ಅನೇಕ ಗಣ್ಯರ ಸಂತಾಪ
1992ರ ಅಕ್ಟೋಬರ್ 4ರಂದು ಸಮಾಜವಾದಿ ಪಕ್ಷ ರಚನೆ
ಮುಲಾಯಂ ಸಿಂಗ್ ಯಾದವ್ ಜನತಾ ದಳದಿಂದ ಬೇರ್ಪಟ್ಟು 1992ರ ಅಕ್ಟೋಬರ್ 4ರಂದು ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಪಕ್ಷದ ರಾಷ್ಟ್ರೀಯ ಸಮಾವೇಶವನ್ನು ಮೊದಲ ಬಾರಿಗೆ 4 ನವೆಂಬರ್ 1992ರಂದು ನಡೆಸಲಾಯಿತು. ಇದಾದ ನಂತರ 1993ರಲ್ಲಿ ಯುಪಿಯಲ್ಲಿ 422 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಒಟ್ಟಾಗಿ ಸ್ಪರ್ಧಿಸಿದ್ದವು. ಬಿಎಸ್‌ಪಿಯ 164 ಅಭ್ಯರ್ಥಿಗಳು ಗೆದ್ದರೆ, ಎಸ್‌ಪಿಯ 67 ಅಭ್ಯರ್ಥಿಗಳು ಜಯಗಳಿಸಿದ್ದರು. ಎಸ್‌ಪಿ ತನ್ನ ಮೊದಲ ಚುನಾವಣೆಯಲ್ಲಿಯೇ 67 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚುನಾವಣೆಯಲ್ಲಿ ಎಸ್‌ಪಿ 256 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
2012ರಲ್ಲಿ ಸಿಎಂ ಆದ ಪುತ್ರ ಅಖಿಲೇಶ್
2012ರಲ್ಲಿ ಮುಲಾಯಂ ಸಿಂಗ್ ಅವರು ಪುತ್ರ ಅಖಿಲೇಶ್ ಯಾದವ್ ಅವರನ್ನು ಯುಪಿ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಅಖಿಲೇಶ್ ಯಾದವ್ 5 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರು. ನಂತರ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ನಡುವೆ ವಿವಾದ ಉಂಟಾದಾಗ ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಸಾರಥ್ಯವನ್ನು ವಹಿಸಿಕೊಂಡರು. ಮುಲಾಯಂ ಸಿಂಗ್ ಸಮಾಜವಾದಿ ಪಕ್ಷದ ಪೋಷಕರಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.