ಭಾರೀ ಮಳೆಗೆ ತತ್ತರಿಸಿದ ಮುಂಬೈ
ಮಳೆಯಿಂದಾಗಿ ವಾಣಿಜ್ಯ ನಗರಿಯಲ್ಲಿ ಪ್ರತಿಕೂಲ ವಾತಾವರಣ ಸೃಷ್ಠಿ, ಸಂಚಾರ ಅಸ್ತವ್ಯಸ್ತ.
ಮುಂಬೈ: ಮುಂಬೈನಲ್ಲಿ ನೆನ್ನೆಯಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ವಾಣಿಜ್ಯ ನಗರಿ ತತ್ತರಿಸಿದೆ. ಮುಂದಿನ 24 ಗಂಟೆ ಕೂಡ ಮುಂಬೈನ ಕೆಲವು ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿಯುವುದು ಎಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಸಂಜೆಯಿಂದ ವಾಣಿಜ್ಯ ನಗರಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಬೈನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಜಲಾವೃತ್ತವಾಗಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಅಪಾರ ಪ್ರಮಾಣದ ವ್ಯತ್ಯಾಸ ಉಂಟಾಗಿದೆ.
ಸ್ಥಳೀಯ ರೈಲುಗಳು ಸುಮಾರು 30 ನಿಮಿಷಗಳ ಕಾಲ ತಡವಾಗಿ ಸಂಚರಿಸಲಿವೆ. ವಿಮಾನ ನಿಲ್ದಾಣ ಜಲಾವೃತ್ತವಾಗಿರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ಕೂಡ ವ್ಯತ್ಯಯ ಉಂಟಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಎರಡನೇ ಭಾರಿ ಮುಂಬೈನಲ್ಲಿ ಮಹಾಮಳೆ ಸುರಿಯುತ್ತಿದೆ. ಆ.29 ರಂದು ಮುಂಬೈನಲ್ಲಿ ಸುರಿದ ಭಾರಿ ಮಳೆಯಲ್ಲಿ 14 ಮಂದಿ ಮೃತಪಟ್ಟಿದ್ದರು.