ಮುಂಬೈ ಪಾದಚಾರಿ ಮೇಲ್ಸೇತುವೆ ಕುಸಿತ: ಟ್ರಾಫಿಕ್ ಸಿಗ್ನಲ್ ಇಲ್ಲದಿದ್ರೆ...!
ಗುರುವಾರ ಸಂಜೆ ನಡೆದ ದುರ್ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, 33 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ.
ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಸ್ಟೇಷನ್ ಟರ್ಮಿನಲ್ನ ಪ್ಲಾಟ್ಫಾರ್ಮ್ 1ರಲ್ಲಿನ ಗುರುವಾರ ಸಂಜೆ ಪಾದಚಾರಿ ಮೇಲ್ಸೇತುವ ಕುಸಿದ ಸಂದರ್ಭದಲ್ಲಿ ಮತ್ತಷ್ಟು ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದು ಟ್ರಾಫಿಕ್ ಸಿಗ್ನಲ್ ಲೈಟ್ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
"ಮೇಲ್ಸೇತುವೆ ಕುಸಿದ ಸಂದರ್ಭದಲ್ಲಿ ಟ್ರಾಫಿಕ್'ನಲ್ಲಿ ರೆಡ್ ಸಿಗ್ನಲ್ ಲೈಟ್ ಇತ್ತು. ಎಲ್ಲರೂ ಮುಂದೆ ಚಲಿಸಲು ಹಸಿರು ದೀಪಕ್ಕಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆಯೇ ಪಾದಚಾರಿಗಳ ಸಮೇತ ಮೇಲ್ಸೇತುವೆ ಕುಸಿಯಿತು. ಒಂದು ವೇಳೆ ಗ್ರೀನ್ ಲೈಟ್ ಬಂದ ಬಳಿಕ ಸೇತುವೆ ಕುಸಿದಿದ್ದರೆ, ಮತ್ತಷ್ಟು ಜನರು ಬಲಿಯಾಗುತ್ತಿದ್ದರು. ಎಲ್ಲಾ ಆ ಈಶ್ವರನ ಇಚ್ಛೆ, ರೆಡ್ ಸಿಗ್ನಲ್ ಲೈಟ್ ಇಲ್ಲದಿದ್ದಾರೆ, ಇಷ್ಟೊತ್ತಿಗೆ ನಾನೂ ಸಹ ಈ ದುರಂತಕ್ಕೆ ಬಲಿಯಾಗಿರುತ್ತಿದ್ದೆ" ಎಂದು ಟ್ಯಾಕ್ಸಿ ಚಾಲರೊಬ್ಬರು ಹೇಳಿದ್ದಾರೆ.
ಗುರುವಾರ ಸಂಜೆ ನಡೆದ ದುರ್ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, 33 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸೆಂಟ್ ಜಾರ್ಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರೂ.ಗಳು ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದು, ಚಿಕಿತ್ಸಾ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ.