VIDEO: ನನ್ನ ಚಹಾಗೆ ಮುಸಲ್ಮಾನರ ಸಕ್ಕರೆಯೂ ಸಿಗಬಹುದೇ?- ವರುಣ್ ಗಾಂಧಿ ವಿವಾದಿತ ಹೇಳಿಕೆ
ನಾನು ಹಿಂದೂ ಮತ್ತು ಮುಸಲ್ಮಾನರೆಂದು ಪ್ರಪಂಚವನ್ನು ನೋಡುವುದಿಲ್ಲ ಎಂದು ವರುಣ್ ಗಾಂಧಿ ಹೇಳಿದರು.
ಪಿಲಿಭಿತ್: 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಕ್ಷಣ ರೋಚಕವಾಗಿ ಕಾಣುತ್ತಿದೆ. ಚುನಾವಣಾ ಪ್ರಚಾರದ ವೇಳೆ ಹಲವು ನಾಯಕರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದ ನಾಯಕರ ಪಟ್ಟಿಯಲ್ಲಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೂಡ ಸೇರಿದ್ದಾರೆ. ಪಿಲಿಭಿಟ್ ಲೋಕಸಭಾ ಕ್ಷೇತ್ರದ ಸಾರ್ವಜನಿಕ ಸಭೆಯೊಂದರಲ್ಲಿ ವರುಣ್ ಗಾಂಧಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ವರುಣ್ ಗಾಂಧಿ ಈ ಸಮಯದಲ್ಲಿ, ಮುಸ್ಲಿಂ ಸಹೋದರರಿಗೆ ಮಾತನ್ನು ಹೇಳಲು ಬಯಸುತ್ತೇನೆ, ನೀವು ನನಗೆ ಮತ ಚಲಾಯಿಸಿದರೆ ನಾನು ಬಹಳ ಸಂತೋಷವಾಗಿರುತ್ತೇನೆ. ನೀವು ನನಗೆ ಮತ ಚಲಾಯಿಸದಿದ್ದರೂ ಕೂಡ ಪರವಾಗಿಲ್ಲ. ನೀವು ನನ್ನಿಂದ ಕೆಲಸ ಮಾಡಿಸಿಕೊಳ್ಳಲು ಅದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ನನ್ನ ಚಹಾದಲ್ಲಿ(ಚುನಾವಣೆ) ನಿಮ್ಮ ಸಕ್ಕರೆಯೂ(ಮತದಾನ) ಬೆರೆತರೆ ಚಹಾ ಮತ್ತಷ್ಟು ಸಿಹಿಯಾಗುತ್ತದೆ. ಹಾಗಾಗಿ ಕೆಲ ಮುಸಲ್ಮಾನರ ಸಕ್ಕರೆ ನನ್ನ ಚಹಾಗೆ ಸಿಗಬಹುದೇ ಎಂದಿದ್ದಾರೆ.
ರೈತರು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ದೇಶಕ್ಕಾಗಿ ಶ್ರಮಿಸುತ್ತಿರುವವರು ಯಾವುದೇ ಧರ್ಮ ಅಥವಾ ಜಾತಿಯನ್ನು ನೋಡಿ ನಮ್ಮನ್ನು ಕಾಯುತ್ತಿಲ್ಲ. ನಾನು ಪ್ರಪಂಚವನ್ನು ನನ್ನ ಸ್ವಂತ ದೃಷ್ಟಿ ಮತ್ತು ಬಹು ಆಯಾಮಗಳಿಂದ ನೋಡುತ್ತೇನೆಯೇ ಹೋರತು, ಎರಡು ತುದಿಗಳಲ್ಲಿ ನೋಡುತ್ತೇನೆ. ಹಿಂದೂ ಮತ್ತು ಮುಸಲ್ಮಾನರೆಂದು ಪ್ರಪಂಚವನ್ನು ವಿಂಗಡಿಸಿ ನೋಡುವುದಿಲ್ಲ ಎಂದು ವರುಣ್ ಗಾಂಧಿ ಹೇಳಿದ್ದಾರೆ.