ಬಿಜೆಪಿ ಸರ್ಕಾರದಡಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ : ಶಿಯಾ ಗುರು
ಮೋದಿ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ `ಅಲ್ಪಸಂಖ್ಯಾತರನ್ನು ತಲುಪಿದ ಸರ್ಕಾರ` ಎಂದು ಶಿಯಾ ಗುರು ಕಲ್ಬೇ ಜಾವಾದ್ ಶ್ಲಾಘಿಸಿದ್ದಾರೆ.
ಲಖನೌ: ಕೇಂದ್ರದ ಮೋದಿ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು `ಅಲ್ಪಸಂಖ್ಯಾತರನ್ನು ತಲುಪಿದ ಸರ್ಕಾರ' ಎಂದು ಶ್ಲಾಘಿಸಿರುವ ಶಿಯಾ ಗುರು ಕಲ್ಬೇ ಜಾವಾದ್, ಮುಸ್ಲಿಮರು ಇವರ ಆಳ್ವಿಕೆಯ ಅಡಿಯಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಲವ್ ಜಿಹಾದ್ ಮತ್ತು ಗೋ ಹತ್ಯೆ ಪ್ರಕರಣಗಳನ್ನು ಹೊರತುಪಡಿಸಿ ಬಿಜೆಪಿ ಸರ್ಕಾರದ ಅಡಿಯಲ್ಲಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ ಎಂದು ಕಾನ್ಫುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಶಿಯಾ ಗುರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಖಿಲೇಶ್ ಯಾದವ್ ಅಧಿಕಾರಾವಧಿಯಲ್ಲಿ 600 ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಚಳವಳಿಗಳು ನಡೆದವು. ಆದರೆ ಆದಿತ್ಯನಾಥ ಸರ್ಕಾರದ ಎಂಟು ತಿಂಗಳಲ್ಲಿ ಅವಧಿಯಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ, ಎಲ್ಲಾ ಸಂಘಟನೆಗಳೂ ಸುಪ್ರೀಂ ಕೋರ್ಟ್ ತೀರ್ಪನ್ನು ನಿರೀಕ್ಷಿಸಬೇಕೆಂದು ಹೇಳಿದರು.
ಉತ್ತರಪ್ರದೇಶದ ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರ "ಅತ್ಯಂತ ಭ್ರಷ್ಟ ಮತ್ತು ಅಪ್ರಾಮಾಣಿಕ" ಎಂದು ಆರೋಪಿಸಿದ ಅವರು, ಕಟ್ಟಡ ನಿರ್ಮಾಣ ಯೋಜನೆಗಳ ಹೆಸರಿನಲ್ಲಿ ಅಖಿಲೇಶ್ ಸರಕಾರ 20 ಸಾವಿರ ಕೋಟಿ ರೂ. ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿದೆ ಎಂದು ಜಾವಾದ್ ಆರೋಪಿಸಿದರು.