ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ನಾಗಾ ಸನ್ಯಾಸಿಗಳ ಸವಾಲು...!
ಅಯೋಧ್ಯೆಯಲ್ಲಿ ಕುಂಭ ಮೇಳಕ್ಕೂ ಮುಂಚಿತವಾಗಿ, ರಾಮ ಮಂದಿರದ ನಿರ್ಮಾಣದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ...
ಲಕ್ನೋ/ಪ್ರಯಾಗರಾಜ್: ಅಯೋಧ್ಯೆಯಲ್ಲಿ ಕುಂಭ ಮೇಳಕ್ಕೂ ಮುಂಚಿತವಾಗಿ, ರಾಮ ಮಂದಿರದ ನಿರ್ಮಾಣದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ನಾಗಾ ಸಂತರು ಅಯೋಧ್ಯೆಗೆ ಪ್ರಯಾಣಿಸುತ್ತಾರೆ ಎಂದು ಆಲ್ ಇಂಡಿಯಾ ಅಖಾರಾ ಪರಿಷತ್ನ ಅಧ್ಯಕ್ಷರಾಗಿರುವ ನರೇಂದ್ರ ಗಿರಿ ಹೇಳಿಕೆ ನೀಡಿದ್ದಾರೆ.
ಕುಂಭಮೇಳದಲ್ಲಿ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ)ನ ಧರ್ಮ ಸಂಸತ್ತಿನಲ್ಲಿ ದೇಶದಾದ್ಯಂತದ ಸಾಧು ಸಂತರು ರಾಮ ಮಂದಿರ ನಿರ್ಮಾಣವನ್ನು ಚರ್ಚಿಸುತ್ತಿದ್ದಾರೆ. ಜನವರಿ 31 ಮತ್ತು ಫೆಬ್ರವರಿ 1 ರಂದು ನಡೆಯಲಿರುವ ವಿಶ್ವ ಹಿಂದೂ ಪರಿಷತ್ ಧರ್ಮ ಸಂಸತ್ತಿನಲ್ಲಿ ನಾಗಾ ಸನ್ಯಾಸಿಗಳ ಅಯೋಧ್ಯೆ ಪ್ರಯಾಣದ ಬಗ್ಗೆ ಕಾರ್ಯತಂತ್ರ ಸಿದ್ದವಾಗಲಿದೆ ಎಂದು ಹೇಳಿದರು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಇಕ್ಬಾಲ್ ಅನ್ಸಾರಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಮುಸ್ಲಿಂ ಪಕ್ಷಗಳೊಂದಿಗೆ ಆಲ್ ಇಂಡಿಯಾ ಅಖಾರಾ ಪರಿಷತ್ ನಿರಂತರ ಸಂಪರ್ಕದಲ್ಲಿದೆ ಎಂದು ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ. ಇದರ ಜೊತೆಯಲ್ಲಿ, ಅಯೋಧ್ಯೆಯ ವಿವಾದದ ಬಗ್ಗೆ ವಸಾಹತು ಒಪ್ಪಂದವನ್ನು ಸಹ ಪ್ರಯತ್ನಿಸಲಾಗುತ್ತಿದೆ. ದೇಶದ ವಿಕಾಸಕ್ಕಾಗಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂಬ ಭ್ರಮೆಯಲ್ಲಿ ಬಿಜೆಪಿಯ ನಾಯಕರಿದ್ದಾರೆ. ಆದರೆ, ಹಿಂದೂಗಳು ರಾಮಮಂದಿರಕ್ಕಾಗಿ ಮಾತ್ರವೇ ಬಿಜೆಪಿಗೆ ಮತ ಚಲಾಯಿಸಿದರು ಎಂದು ನರೇಂದ್ರ ಗಿರಿ ಹೇಳಿದರು.
ಬಿಜೆಪಿ ಅಯೋದ್ಯೇಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭ ಮಾಡಿದರಷ್ಟೇ ಮುಂದಿನ 5 ವರ್ಷ ದೇಶದಲ್ಲಿ ಆಡಳಿತ ನಡೆಸಲಿದೆ. ಆದರೆ ರಾಮಮಂದಿರ ನಿರ್ಮಾಣ ಪ್ರಾರಂಭಿಸದಿದ್ದರೆ, ಇದೇ ಅವರ ಕೊನೆಯ ವರ್ಷವಾಗಿರುತ್ತದೆ ಎಂದು ಅವರು ಹೇಳಿದರು.