ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಕೈಗೊಳ್ಳಲು ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ನೀಡಿದ್ದ ನೋಟಿಸನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ತಿರಸ್ಕರಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯ ಸಭೆಯ ಸಭಾಪತಿಯೂ ಆಗಿರುವ ಎಂ. ವೆಂಕಯ್ಯನಾಯ್ಡು ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಉನ್ನತ ಕಾನೂನು ಮತ್ತು ಸಂವಿಧಾನಿಕ ತಜ್ಞರ ಜತೆ ಸಮಾಲೋಚನೆ ನಡೆಸಿದ್ದಾರೆ.



''ನಾನು ಸಿಜೆಐ ವಿರುದ್ಧ ಪ್ರಸ್ತಾಪಿಸಿದ ಐದು ಆರೋಪಗಳನ್ನು ಪ್ರಸ್ತಾವನೆಯಲ್ಲಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಗೊತ್ತುವಳಿಯಲ್ಲಿ ಮಂಡಿಸಲಾಗಿರುವ ನಿಜಾಂಶಗಳು ಸತ್ವಪೂರ್ಣವಾಗಿಲ್ಲ. ಇದರಲ್ಲಿ ಯಾವುದೇ ದಾಖಲೆಯು ಸಿಜೆಐ ಕಳಪೆ ವರ್ತನೆಯನ್ನು  ದೃಢೀಕರಿಸುವುದಿಲ್ಲ'' ಎಂದು ನಾಯ್ಡು ಹೇಳಿದ್ದಾರೆ. 


ತಮ್ಮ ಹೈದರಾಬಾದ್ ಪ್ರವಾಸವನ್ನು ಮೊಟಕುಗೊಳಿಸಿದ್ದ ನಾಯ್ಡು ಅವರು, ಭಾನುವಾರ ರಾಜಧಾನಿಗೆ ಹಿಂತಿರುಗಿ ಉನ್ನತ ಕಾನೂನು ಮತ್ತು ಸಂವಿಧಾನಿಕ ತಜ್ಞರ ಜತೆ ಸಲಹೆ ಹಾಗೂ ಸೂಚನೆಗಳನ್ನು ಪಡೆದುಕೊಂಡಿದ್ದರು. ಇದರಂತೆ ತೀವ್ರ ಸಮಾಲೋಚನೆಗಳ ಬಳಿಕ ನಾಯ್ಡು, ಇಂದು ವಿರೋಧ ಪಕ್ಷಗಳು ಸಲ್ಲಿಸಿದ್ದ ವಾಗ್ದಂಡನೆ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ.