ಶಿಂಜೋ ಅಬೆಯನ್ನು ಆತ್ಮೀಯವಾಗಿ ಬರಮಾಡಿಕೊಂಡ ನಮೋ
ಗುಜರಾತ್ ನಲ್ಲಿ ನಡೆಯಲಿರುವ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗೆ ಪತ್ನಿ ಅಕೀ ಅಬೆರೊಂದಿಗೆ ಅಹ್ಮದಾಬಾದ್ ಗೆ ಆಗಮಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆಯನ್ನು ಪ್ರಧಾನಿ ಮೋದಿ ಪ್ರೀತಿಯ ಅಪ್ಪುಗೆಯ ಮೂಲಕ ಬರಮಾಡಿಕೊಂಡರು.
ಅಹ್ಮದಾಬಾದ್: ಗುಜರಾತ್ ನ ಗಾಂಧಿನಗರದಲ್ಲಿ ನಡೆಯುವ 12ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಜರಾತ್ ನ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಪತ್ನಿ ಅಕೀ ಅಬೆಯೊಂದಿಗೆ ಆಗಮಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು.
ಜಪಾನ್ ದೇಶದ ಸಹಯೋಗದೊಂದಿಗೆ ಭಾರತವು ಬುಲೆಟ್ ರೈಲು ಯೋಜನೆಗೆ ಆಸಕ್ತಿ ತೋರಿದ್ದು ಈ ನಿಟ್ಟಿನಲ್ಲಿ ಜಪಾನ್ ಪ್ರಧಾನಿಯ ಭೇಟಿ ತೀವ್ರ ಕುತೂಹಲ ಉಂಟುಮಾಡಿದೆ. ವಾರ್ಷಿಕ ಶೃಂಗ ಸಭೆಗೆ ಆಗಮಿಸಿರುವ ಜಪಾನ್ ಪ್ರಧಾನಿ ಶಿಂಜೋ ಮತ್ತು ಅವರ ಪತ್ನಿ ಇಂದು ಮತ್ತು ನಾಳೆ ಭಾರತದಲ್ಲೇ ಉಳಿಯಲಿದ್ದಾರೆ.
ಜಪಾನ್ ಪ್ರಧಾನಿ ಶಿಂಜೋ ಅಬೆಗೆ ಅದ್ಧೂರಿ ಸ್ವಾಗತ ಕೋರಿದ ನಂತರ ಅವರನ್ನು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದ ವರೆಗೂ ಸುಮಾರು 8 ಕಿಲೋ ಮೀಟರ್ ಗಳ ರೋಡ್ ಷೋ ಮೂಲಕ ಕರೆದೊಯ್ಯಲಾಯಿತು. ಇದೇ ಮೊದಲ ಬಾರಿಗೆ ಭಾರತ ದೇಶದ ಪ್ರಧಾನಿ ಮತ್ತೊಂದು ದೇಶದ ಪ್ರಧಾನಿಯೊಂದಿಗೆ ರೋಡ್ ಷೋ ನಲ್ಲಿ ಪಾಲ್ಗೊಂಡಿದ್ದು ಆಕರ್ಷಕವಾಗಿತ್ತು.
ಇನ್ನೂ ಎರಡೂ ರಾಷ್ಟ್ರಗಳ ಪ್ರಧಾನಿಗಳು ಭಾರತ-ಜಪಾನ್ ನಡುವಿನ ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಹಾಗೂ ಶಿಂಜೋ ನಾಳೆ ಮುಂಬೈ-ಅಹ್ಮದಾಬಾದ್ ನಡುವಿನ ಮೊದಲ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ.