ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಮಹಾಭಾರತದ ದುರ್ಯೋಧನ ಮತ್ತು ದುಶ್ಯಾಸನ ಇದ್ದಂತೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ನಲ್ಲಿ ಸೋಮವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಪಾಂಡವರ ವಿರುದ್ಧ ಯುದ್ಧ ಸಾರಿದ್ದ ಮಹಾಭಾರತದ ದುರ್ಯೋಧನ ಮತ್ತು ದುಶ್ಯಾಸನನ ಹೆಸರು ಪ್ರಸ್ತಾಪಿಸಿದರು. "ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ದುರ್ಯೋಧನ ಮತ್ತು ದುಶ್ಯಾಸನರು. ಇದು ಕೇವಲ ಪಶ್ಚಿಮ ಬಂಗಾಳ ಚುನಾವಣೆಯಲ್ಲ, ಲೋಕಸಭಾ ಚುನಾವಣೆ. ಇದು ನಿಮ್ಮ(ನರೇಂದ್ರ ಮೋದಿ ಮತ್ತು ಅಮಿತ್ ಶಾ)  ಕಾರ್ಯಕ್ಷಮತೆ ವಿಮರ್ಶೆ ಮಾಡುವ ಸಂದರ್ಭ. ಆದರೂ ನೀವೇಕೆ(ಮೋದಿ ಮತ್ತು ಶಾ) ನನ್ನೊಂದಿಗೆ ಪ್ರಶ್ನೆಗಳನ್ನು ಕೇಳುತ್ತೀರಿ? ನಾನು ಮಾಡಿದ ಶೇ.1ರಷ್ಟು ಕೆಲಸ ಸಹ ನೀವು ಮಾಡಿಲ್ಲ" ಎಂದು ವಾಗ್ದಾಳಿ ನಡೆಸಿದರು.


ಭಾನುವಾರವಷ್ಟೇ ಕೂಚ್ ಬೆಹಾರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಚಿಟ್ ಫಂಡ್ ಹಗರಣದ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ "ಬಡವರ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದ್ದ ನೀವು, ಇದುವರೆಗೂ ಏಕೆ ಪಾವತಿಸಿಲ್ಲ?" ಎಂದು ಇಂದು ನಡೆದ ರ್ಯಾಲಿಯಲ್ಲಿ ಕಿಡಿ ಕಾರಿದ ಮಮತಾ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.