ನವದೆಹಲಿ: ಲೋಕಸಭಾ ಚುನಾವಣೆ 2019ರ ಮತಎಣಿಕೆ ಗುರುವಾರ ಪೂರ್ಣಗೊಂಡಿದ್ದು, ಭಾರತೀಯ ಜನತಾ ಪಕ್ಷ ಪೂರ್ಣ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ, ನರೇಂದ್ರ ಮೋದಿಯನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಕರೆದಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲವು ಸಾಧಿಸಿದ ಬಳಿಕ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಜಾತೀಯತೆ, ವಂಶ ರಾಜಕಾರಣವನ್ನು ನಡೆಸಿಕೊಂಡು ಬಂದಿವೆ. ಆದರೆ ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದ ಫಲವಾಗಿ 2019ರ ಜನಾದೇಶವು ಜಾತಿವಾದ, ರಾಜವಂಶ ಮತ್ತು ಮನವೊಲಿಸುವಿಕೆಯ ರಾಜಕೀಯವನ್ನು ಸಮಾಧಿ ಮಾಡಿದ್ದು, ಇದು 'ರಾಷ್ಟ್ರೀಯತೆಯ ವಿಜಯ' ಎಂದಿದ್ದಾರೆ.


ನರೇಂದ್ರ ಮೋದಿಯವರು ಬಿಜೆಪಿಯ ವಿಜಯದ `ಮಹಾನಾಯಕ'ನಾಗಿದ್ದು, ಬಿಜೆಪಿ ಗೆಲುವು ಸ್ವಾತಂತ್ರ್ಯದ ನಂತರದ ಐತಿಹಾಸಿಕ ಗೆಲುವಾಗಿದೆ. ಇದು ಪಕ್ಷದ ಪ್ರತಿ ಕಾರ್ಯಕರ್ತನ ಗೆಲುವು. ಇದು ಬಿಜೆಪಿ ಸರ್ಕಾರದ 'ಸಬ್ ಕಾ ಸಾಥ್ ಸಬ ಕಾ ವಿಕಾಸ್' ನೀತಿ. ಹಾಗೆಯೇ ಮೋದಿಜೀ ಅವರ ಜನಪ್ರಿಯತೆಯ ಗೆಲುವು ಎಂದು ಶಾ ಹೇಳಿದರು.


ಮೋದಿ ಸೋಲಿಸಲು ಮೈತ್ರಿಕೂಟ ರಚಿಸಿದ ವಿರೋಧ ಪಕ್ಷಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಹಿಂದೆ ಬಿಜೆಪಿ ಶೇ.50ರಷ್ಟು ಮತಗಳನ್ನು ಗಳಿಸಲು ಹೋರಾಟ ನಡೆಸಿತ್ತು. ಆದರೀಗ ಉತ್ತರಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ 17 ರಾಜ್ಯಗಳಲ್ಲಿ ಜನತೆ ಶೇ.50ಕ್ಕಿಂತಲೂ ಅಧಿಕ ಮತಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. "ಶೇ.50 ಸ್ಥಾನಗಳನ್ನು ಗೆಲ್ಲಲು ಕಠಿಣ ಪರಿಶ್ರಮ ಹಾಕಲು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೆ. ಈಗ 17 ರಾಜ್ಯಗಳಲ್ಲಿ ಜನತೆ ಶೇ.50ಕ್ಕೂ ಹೆಚ್ಚಿನ ಮತಗಳನ್ನು ನೀಡುವ ಮೂಲಕ ನಮ್ಮನ್ನು ಆಶೀರ್ವದಿಸಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು, 17 ರಾಜ್ಯಗಳಲ್ಲಿ ಕೆಲವೆಡೆ ತನ್ನ ಖಾತೆಯನ್ನೇ ತೆರೆದಿಲ್ಲ ಎಂದು ಹೇಳಿದರು.


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ನಡೆಸಿದ ಹಿಂಸಾಚಾರದ ನಡುವೆಯೂ ಬಿಜೆಪಿ 18 ಸ್ಥಾನಗಳ ಗೆಲುವು ಸಾಧಿಸಿದೆ. ಹಾಗೆಯೇ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜಯಗಳಿಸಿದೆ. ಮುಂಬರುವ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.