ಇಂದು ರಾಷ್ಟ್ರೀಯ ಯುವ ದಿನ
ಯುವಕರಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದವರು ಸ್ವಾಮಿ ವಿವೇಕಾನಂದರು. ಅವರ ಜನ್ಮ ದಿನವನ್ನು `ರಾಷ್ಟ್ರೀಯ ಯುವ ದಿನ`ವಾಗಿ ಆಚರಿಸಲಾಗುತ್ತದೆ.
ನವದೆಹಲಿ: ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಯುವಕರಿಗೆ ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಎಂದೂ ಶಕ್ತಿ ಕಳೆದುಕೊಳ್ಳಬಾರದು ಎಂದು ಕರೆ ನೀಡಿದ್ದ ಅವರು ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳಸಲು ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದವರು. ಹಾಗಾಗಿ ಅವರ ಜನ್ಮ ದಿನವನ್ನು 'ರಾಷ್ಟ್ರೀಯ ಯುವ ದಿನ'ವಾಗಿ ಆಚರಿಸಲಾಗುತ್ತದೆ.
ಸ್ವಾಮಿ ವಿವೇಕಾನಂದರು 1862ರಲ್ಲಿ 12ನೇ ಜನವರಿ ಮಕರಸಂಕ್ರಾಂತಿಯ ಶುಭದಿನದಂದು ಕಲ್ಕತ್ತದಲ್ಲಿ ಜನಿಸಿದರು. ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಅವರು ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಪರಿಗಣಿತರಾಗಿದ್ದಾರೆ.
ಸ್ವಾಮಿ ವಿವೇಕಾನಂದ ಸ್ಫೂರ್ತಿದಾಯಕ ನುಡಿಗಳು
* ಏಳಿ, ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ.
* ನಮ್ಮ ಹಾಗೂ ದೇವರ ಬಗ್ಗೆ ನಮಗಿರುವ ನಂಬಿಕೆಯೇ ಹಿರಿಮೆಗೆ ಸ್ಪೂರ್ತಿ.
* ಒಂದು ಕ್ಷಣದ ಸಿಟ್ಟಿನಿಂದ ನೀವು ಪಾರಾದರೆ, ನಾಲ್ಕು ದಿನದ ದುಃಖದಿಂದ ಪಾರಾದಂತೆ -ಸ್ವಾಮಿ ವಿವೇಕಾನಂದ.
* ಶತಮೂರ್ಖ ಕೂಡ ತನ್ನ ಹೃದಯಕ್ಕೆ ಹತ್ತಿರವಾದ ಕೆಲಸವನ್ನು ಸಾಧಿಸಬಲ್ಲ. ಆದರೆ ಮಾಡುವ ಕೆಲಸವನ್ನು ತನ್ನ ಅಭಿರುಚಿಗೆ ತಕ್ಕಂತೆ ರೂಪಿಸುವವನು ಮಾತ್ರ ಬುದ್ಧಿವಂತ.
* ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೇವೆಯೋ ಅದರ ಬಗ್ಗೆ ಎಚ್ಚರದಿಂದಿರಿ. -ಸ್ವಾಮಿ ವಿವೇಕಾನಂದ.
* ಧರ್ಮವೆಂದರೆ ತ್ಯಾಗವೇ ಹೊರತು ಬೇರೇನೂ ಅಲ್ಲ.
* ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ!
* ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.
* ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.
* ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.
* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ.
* ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ.
* ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ, ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.