ಮುಂಬೈ: ಶರದ್ ಪವಾರ್ ಅವರ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಪಕ್ಷದ ಒಂದು ಗುಂಪು ಎನ್‌ಸಿಪಿ ತೊರೆದು ಬಿಜೆಪಿ ಸೇರ್ಪಡೆಗೊಂಡಿತ್ತು. ಇದೀಗ ಎನ್‌ಸಿಪಿ ಪಕ್ಷದ ಪ್ರಭಾವಿ ನಾಯಕ ಸತಾರಾ ಸಂಸದ ಉದಯನ್‌ರಾಜೆ ಭೋಸಲೆ ಸೆಪ್ಟೆಂಬರ್ 14 ರಂದು ಬಿಜೆಪಿಗೆ ಸೇರಲು ಸಜ್ಜಾಗಿದ್ದಾರೆ. ಇದರಿಂದಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.


COMMERCIAL BREAK
SCROLL TO CONTINUE READING

ಉದಯನ್‌ರಾಜೆ ಭೋಸಲೆ ಬಿಜೆಪಿಗೆ ಸೇರ್ಪಡೆಯಾಗುವ ತೀವ್ರ ಊಹಾಪೋಹಗಳ ಮಧ್ಯೆ, ಸತಾರಾ ಸಂಸದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಗುರುವಾರ ಪುಣೆಯ ನಿವಾಸದಲ್ಲಿ ಭೇಟಿಯಾದರು.


ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಅವರ ವಂಶಸ್ಥ ಭೋಸಲೆ ಮುಂಬೈಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಎರಡು ದಿನಗಳ ನಂತರ ಉಭಯ ನಾಯಕರ ನಡುವಿನ ಸಭೆ ನಡೆಯಿತು.


ಆದರೆ, ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭೋಸಲೆ ಪವಾರ್ ಅವರನ್ನು ಭೇಟಿಯಾದರು ಎಂದು ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ನಂತರ ಸುದ್ದಿಗಾರರಿಗೆ ತಿಳಿಸಿದರು.


ಭೋಸಲೆ ಬಿಜೆಪಿಗೆ ಸೇರುತ್ತಿರುವರೇ ಎಂದು ಕೇಳಿದಾಗ, ಎನ್‌ಸಿಪಿ ಸಂಸದರೇ ಆಡಳಿತ ಪಕ್ಷಕ್ಕೆ ಸೇರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಮುಂಡೆ ಪ್ರತಿಕ್ರಿಯಿಸಿದರು.


ಶರದ್ ಪವಾರ್ ಅವರ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ಹೆಚ್ಚುತ್ತಿದೆ. ಎನ್‌ಸಿಪಿ ನಾಯಕರಲ್ಲಿ ಒಂದು ಭಾಗವು ಇತ್ತೀಚೆಗೆ ಪಕ್ಷವನ್ನು ತೊರೆ ಬಿಜೆಪಿ ಸೇರ್ಪಡೆಗೊಂಡಿತು. 


ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ ಎಂಬಂತೆ, ಭೋಸಲೆ ತಮ್ಮ ಪಕ್ಷಕ್ಕೆ ಸೇರಿಕೊಂಡರೆ ಸಂತೋಷವಾಗುವುದಾಗಿ ಸಿಎಂ ದೇವೇಂದ್ರ ಫಡ್ನವೀಸ್ ಕಳೆದ ತಿಂಗಳು ಹೇಳಿದ್ದರು. ಸತಾರಾದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಕ್ಕಾಗಿ ಭೋಸಲೆ ಮುಖ್ಯಮಂತ್ರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನಂತರ ಫಡ್ನವಿಸ್ ಈ ಹೇಳಿಕೆ ನೀಡಿದ್ದರು.


ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ತನ್ನ ಕ್ಷೇತ್ರದ ಪ್ರಗತಿಯಲ್ಲಿ "ಅಡೆತಡೆಗಳನ್ನು" ಸೃಷ್ಟಿಸಿದೆ ಎಂದು ಎನ್‌ಸಿಪಿ ನಾಯಕ ಉದಯನ್‌ರಾಜೆ ಭೋಸಲೆ ಸ್ವಪಕ್ಷದ ವಿರುದ್ಧವೇ ಆರೋಪಿಸಿದರು.


ಮಹಾರಾಷ್ಟ್ರದ ಎನ್‌ಸಿಪಿಯ ನಾಲ್ವರು ಸಂಸದರಲ್ಲಿ ಒಬ್ಬರಾದ ಭೋಸಲೆ, ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ಕ್ಷೇತ್ರದ ಜನರ ಹಿತದೃಷ್ಟಿಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.


ಅವರ ಸೋದರಸಂಬಂಧಿ ಮತ್ತು ಎನ್‌ಸಿಪಿಯ ಸತಾರಾ ಶಾಸಕ ಶಿವೇಂದ್ರಸಿಂಘ ಭೋಸಲೆ ಅವರು ಇತ್ತೀಚೆಗೆ ಸಂದೀಪ್ ನಾಯಕ್ ಮತ್ತು ವೈಭವ್ ಪಿಚಾದ್ ಸೇರಿದಂತೆ ಇತರ ಶಾಸಕರೊಂದಿಗೆ ಎನ್‌ಸಿಪಿ ತೊರೆದು ಬಿಜೆಪಿಗೆ ಸೇರಿದರು. 


ಬುಧವಾರ ಮಾಜಿ ರಾಜ್ಯ ಸಚಿವ ಮತ್ತು ಎನ್‌ಸಿಪಿಯ ನವೀ ಮುಂಬಯಿನ ಬಲಶಾಲಿ ಗಣೇಶ್ ನಾಯಕ್ ಕೂಡ ಸುಮಾರು 50 ಕಾರ್ಪೋರೇಟರ್‌ಗಳೊಂದಿಗೆ ಬಿಜೆಪಿಗೆ ಸೇರಿದರು.