ಅಧಿಕಾರಕ್ಕೆ ಬಂದರೆ ಪಾಕಿಸ್ತಾನದೊಂದಿಗೆ ಮಾತುಕತೆ: ಎನ್ಸಿಪಿ ಚುನಾವಣಾ ಆಶ್ವಾಸನೆ
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ನವದೆಹಲಿ: ಪುಲ್ವಾಮಾ ದಾಳಿ ಮತ್ತು ಭಾರತದಿಂದ ನಡೆಸಲಾದ ವಾಯುದಾಳಿಯಿಂದಾಗಿ ಭಾರತ-ಪಾಕಿಸ್ತಾನ ಎರಡು ದೇಶಗಳ ನಡುವೆ ಉದ್ವಿಗ್ನ ವಾತಾವರಣವಿದೆ. ಏತನ್ಮಧ್ಯೆ, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸೋಮವಾರ ಎನ್ಸಿಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಸಣ್ಣ ಮತ್ತು ಮಧ್ಯಮ ಆದಾಯದ ರೈತರ ಪೂರ್ಣ ಸಾಲವನ್ನು ಮನ್ನಾ ಮಾಡಲಾಗುವುದು. ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ನಡೆಸಲಾಗುವುದು ಎಂದು ಹೇಳಲಾಗಿದೆ.
ಪಕ್ಷದ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಎನ್ಸಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ಡಿ.ಪಿ. ತ್ರಿಪಾಠಿ ಮಾತನಾಡಿ, ಕಾಶ್ಮೀರ ಕಣಿವೆಯಲ್ಲಿ ಯುವಕರನ್ನು ಮುಖ್ಯವಾಹಿನಿಗೆ ತರುವುದು, ಅವರ ಮನಸ್ಸಿನಲ್ಲಿರುವ ದ್ವೇಷದ ಬೀಜವನ್ನು ತೆಗೆದು ಹಾಕುವ ಬಗ್ಗೆ ಬಲವಾದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳ ಉತ್ತಮತೆಗಾಗಿ ವಿಶೇಷವಾಗಿ ಪಾಕಿಸ್ತಾನದೊಂದಿಗೆ ಭಯೋತ್ಪಾದನೆ ವಿವಾದದ ಬಗ್ಗೆ ಸಂಧಾನವನ್ನು ಪುನರಾರಂಭಿಸುವುದು ಅವಶ್ಯಕವಾಗಿದೆ ಎಂದು ತ್ರಿಪಾಠಿ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಅಂಕಿಅಂಶಗಳ ಪ್ರಕಾರ, 90 ಸಾವಿರಕ್ಕೂ ಹೆಚ್ಚಿನ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವರಲ್ಲಿ ಹೆಚ್ಚಿನವರು ರೈತರು. ಸಣ್ಣ ಮತ್ತು ಮಧ್ಯಮ ಆದಾಯದ ರೈತರಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ತ್ರಿಪಾಠಿ ಹೇಳಿದರು.
ಶರದ್ ಪವಾರ್ ನೇತೃತ್ವದ ಪಕ್ಷವು ಮಹಾರಾಷ್ಟ್ರದಲ್ಲಿ ಕೇವಲ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಜೊತೆಗೆ ಲಕ್ಷದ್ವೀಪ, ಬಿಹಾರ, ಒಡಿಶಾ, ಮೇಘಾಲಯ ಮತ್ತು ಮಣಿಪುರದಲ್ಲಿ ಒಂದೊಂದು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.