ಪಾಟ್ನಾ: ಬಿಹಾರದ ಮುಂಗೇರ್ ನಲ್ಲಿ ಮಂಗಳವಾರ ಮಧ್ಯಾಹ್ನ 110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ಸತತ 31 ಗಂಟೆಗಳ ಕಾರ್ಯಾಚರಣೆ ನಂತರ ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಸದ್ಯ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಸನಾ ಎಂಬ ಬಾಲಕಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದಳು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಬುಧವಾರ ರಾತ್ರಿ ವೇಳೆಗೆ ಬಾಲಕಿಯನ್ನು ರಕ್ಷಿಸಿವೆ.



ಬಾಲಕಿ ಕೊಳವೆ ಬಾವಿಗೆ ಬಿದ್ದ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಬಾಲಕಿಯನ್ನು ರಕ್ಷಿಸಲೂ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಘಟನೆ ಬಗ್ಗೆ NDRF ತಂಡಕ್ಕೆ ಮಾಹಿತಿ ನೀಡಲಾಯಿತು. ಮಂಗಳವಾರ ರಾತ್ರಿ ಎನ್ಡಿಆರ್ಎಫ್ ತಂಡವು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿತು.


ಪೈಪ್ ಸಹಾಯದಿಂದ ಎನ್ಡಿಆರ್ಎಫ್ ತಂಡ ಮಗುವಿಗೆ ಆಮ್ಲಜನಕವನ್ನು ನೀಡಲು ಪ್ರಾರಂಭಿಸಿತು ಮತ್ತು ಮೈಕ್ ಮೂಲಕ ಮಗುವನ್ನು ಸಂಪರ್ಕಿಸಲಾಯಿತು. ಮೈಕ್ ಮೂಲಕ ತಾಯಿಯೂ ಮಗುವಿಗೆ ಧೈರ್ಯ ತುಂಬುತ್ತಿದ್ದರು. ಅಂತಿಮವಾಗಿ ಕಠಿಣ ಕಾರ್ಯಾಚರಣೆ ನಂತರ, ಬುಧವಾರ ರಾತ್ರಿ ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.