ವರ್ಷದಲ್ಲಿ ಎರಡು ಬಾರಿ ಜೆಇಇ, ಎನ್ಇಇಟಿ ಪರೀಕ್ಷೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
ಇದುವರೆಗೂ ಸಿಬಿಎಸ್ಇ ಅಡಿಯಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಗಳನ್ನು ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಆಯೋಜಿಸಲಿದೆ.
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದುವರೆಗೂ ಸಿಬಿಎಸ್ಇ ಅಡಿಯಲ್ಲಿ ನಡೆಸಲಾಗುತ್ತಿದ್ದ ಪರೀಕ್ಷೆಗಳನ್ನು ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಆಯೋಜಿಸಲಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಎನ್ಇಟಿ, ಜನವರಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆಯನ್ನು ಫೆಬ್ರವರಿ ಮತ್ತು ಮೇ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪ್ರಕಾಶ್ ಜಾವಡೆಕರ್ ತಿಳಿಸಿದರು.
'ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷೆಗಳನ್ನು ನಡೆಸಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಗೆಯಾಗದಂತೆ ಸುರಕ್ಷಿತವಾಗಿ, ವಿದ್ಯಾರ್ಥಿ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ. ಪರೀಕ್ಷೆಗಳು ಸಂಪೂರ್ಣ ಕಂಪ್ಯೂಟರ್ ಆಧಾರಿತವಾಗಿದ್ದು, ನಾಲ್ಕೈದು ದಿನಾಂಕಗಳಲ್ಲಿ ನಡೆಯಲಿದೆ. ಈ ದಿನಾಂಕಗಳಲ್ಲಿ ವಿದ್ಯಾರ್ಥಿಗಳು ತಮಗೆ ಅನುಕೂಲವಾದ ದಿನಾನ್ಕವನ್ನು ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಬಹುದು. ಪ್ರಶ್ನೆಪತ್ರಿಕೆ ಮಾದರಿ, ಸಿಲಬಸ್, ಭಾಷೆ ಮತ್ತು ಪರೀಕ್ಷಾ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಪರೀಕ್ಷಾ ದಿನಾಂಕಗಳನ್ನು ಇಲಾಖೆಯ ವೆಬ್ಸೈಟ್ನಲ್ ಪ್ರಕಟಿಸಲಾಗುವುದು ಎಂದು ಹೇಳಿದರು.