30 ಲಕ್ಷ ರೂ.ಗೆ ಪ್ರಶ್ನೆ ಪತ್ರಿಕೆ ಸೋರಿಕೆ: ಅಭ್ಯರ್ಥಿ, ಪರೀಕ್ಷಾ ಕೇಂದ್ರದ ಉಸ್ತುವಾರಿ ಸೇರಿ 8 ಮಂದಿ ಬಂಧನ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಡೀಲ್ ಅನ್ನು 30 ಲಕ್ಷ ರೂ.ಗೆ ಅಂತಿಮಗೊಳಿಸಲಾಗಿತ್ತು, ಈ ಪೈಕಿ 10 ಲಕ್ಷ ರೂ.ವನ್ನು ಪರೀಕ್ಷೆ ಮುಗಿದ ಕೂಡಲೇ ನೀಡಲಾಗುವುದು ಎಂದು ಮಾತನಾಡಿಕೊಳ್ಳಲಾಗಿತ್ತು.
ಜೈಪುರ: ಭಾನುವಾರ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET Exam)ಯ ಪ್ರಶ್ನೆ ಪ್ರತಿಕೆ ಸೋರಿಕೆ ಆರೋಪದ ಮೇರೆಗೆ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿ, ಪರೀಕ್ಷಾ ಕೇಂದ್ರದ ಉಸ್ತುವಾರಿ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷದ ಅಭ್ಯರ್ಥಿ ದಿನೇಶ್ವರಿ ಕುಮಾರಿ ಮತ್ತು ಪರೀಕ್ಷಾ ಕೇಂದ್ರದ ಆಡಳಿತ ಘಟಕದ ಉಸ್ತುವಾರಿ ಮುಖೇಶ್, ದಿನೇಶ್ವರಿ ಚಿಕ್ಕಪ್ಪ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರಿಚಾ ತೋಮರ್ ಸೋಮವಾರ ತಿಳಿಸಿದ್ದಾರೆ.
ಪರೀಕ್ಷೆ ಆರಂಭವಾದ ನಂತರ ಆರೋಪಿ ರಾಮ್ ಸಿಂಗ್ ಮತ್ತು ಮುಖೇಶ್ ಅವರು ನೀಟ್ ಪರೀಕ್ಷೆ(NEET Exam)ಯ ಪತ್ರಿಕೆಯ ಫೋಟೋಗಳನ್ನು ಜೈಪುರದ ಚಿತ್ರಕೂಟ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಬಳಿಕ ಅವರು ಅದನ್ನು ಸಿಕಾರ್‌ನಲ್ಲಿರುವ ಇತರ ಜನರಿಗೆ ಕಳುಹಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Sakinaka rape: ಮೃತ ಸಂತ್ರಸ್ತೆಯ ಅವಲಂಬಿತರಿಗೆ 20 ಲಕ್ಷ ರೂ.ಪರಿಹಾರ ಘೋಷಿಸಿದ ಮಹಾರಾಷ್ಟ್ರ
ಸಿಕಾರ್‌ನಲ್ಲಿದ್ದ ಆರೋಪಿಗಳು ನೀಟ್ ಪರೀಕ್ಷೆಯ ಕೀ ಉತ್ತರ(Answer key)ಗಳನ್ನು ಚಿತ್ರಕೂಟದಲ್ಲಿರುವ ಇಬ್ಬರು ವ್ಯಕ್ತಿಗಳಿಗೆ ಕಳುಹಿಸಿದ್ದರು. ಬಳಿಕ ಈ ಇಬ್ಬರು ವ್ಯಕ್ತಿಗಳು ಅದನ್ನು ಮುಕೇಶ್‌ಗೆ ಕಳುಹಿಸಿದ್ದರು. ನಂತರ ಮುಖೇಶ್ ಅದನ್ನು ರಾಮ್ ಸಿಂಗ್‌ಗೆ ರವಾನಿಸಿದ್ದರು. ಸಿಂಗ್ ದಿನೇಶ್ವರಿಗೆ ಕೀ ಉತ್ತರದ ಸಹಾಯದಿಂದ ಪರೀಕ್ಷೆ ಬರೆಯಲು ನೆರವಾಗಿದ್ದನು ಎಂದು ತಿಳಿದುಬಂದಿದೆ.
ದಿನೇಶ್ವರಿ ಚಿಕ್ಕಪ್ಪ 10 ಲಕ್ಷ ರೂ. ನಗದಿನೊಂದಿಗೆ ಪರೀಕ್ಷಾ ಕೇಂದ್ರ(Exam Center)ದ ಹೊರಗೆ ಕಾಯುತ್ತಿದ್ದರು. ಅಭ್ಯರ್ಥಿಗೆ ಸಹಾಯ ಮಾಡುತ್ತಿದ್ದ ಆರೋಪಿಗಳಿಗೆ ಹಣ ನೀಡಲು ಅವರು ಅಲ್ಲಿ ಕಾಯುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಆರೋಪಿಗಳನ್ನು ಹೊರತುಪಡಿಸಿ ಇ-ಮಿತ್ರ ಕೇಂದ್ರದ ಮಾಲೀಕ ಅನಿಲ್ ಮತ್ತು ಅಲ್ವಾರ್‌ನ ಬಾನ್ಸೂರ್‌ನಲ್ಲಿರುವ ಕೋಚಿಂಗ್ ಸೆಂಟರ್‌ನ ಮಾಲೀಕರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: Dengue ಪರೀಕ್ಷೆಗಾಗಿ ಖಾಸಗಿ ಲ್ಯಾಬ್, ಆಸ್ಪತ್ರೆಗಳು ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವ ಹಾಗಿಲ್ಲ, ಈ ದರಗಳು ನಿಗದಿಯಾಗಿವೆ
ಅಭ್ಯರ್ಥಿ, ಆಕೆಯ ಚಿಕ್ಕಪ್ಪ ಮತ್ತು ಮೋಸ ಮಾಡಲು ಅನುಕೂಲ ಮಾಡಿಕೊಟ್ಟ ಆರೋಪಿಗಳ ನಡುವೆ ಅನಿಲ್ ಮಧ್ಯಸ್ಥಿಕೆ ವಹಿಸಿದ್ದರು ಎನ್ನಲಾಗಿದೆ. ‘ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಡೀಲ್ ಅನ್ನು 30 ಲಕ್ಷ ರೂ.ಗೆ ಅಂತಿಮಗೊಳಿಸಲಾಗಿತ್ತು. ಈ ಪೈಕಿ 10 ಲಕ್ಷ ರೂ.ವನ್ನು ಪರೀಕ್ಷೆ ಮುಗಿದ ಕೂಡಲೇ ನೀಡಲಾಗುವುದು ಎಂದು ಮಾತನಾಡಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಸಿಕಾರ್‌ನಲ್ಲಿ ಕೀ ಉತ್ತರ ಸಿದ್ಧಪಡಿಸಿದವರನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.