ನವದೆಹಲಿ: ಬಿಹಾರದ ಸರ್ಕಾರಿ ಅನುದಾನಿತ ಬಾಲಿಕಾಗೃಹಗಳ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಅಲಕ್ಷ್ಯತೆ ಕುರಿತು ಸಿಬಿಐ ಹಂಗಾಮಿ ನಿರ್ದೇಶಕರಾಗಿದ್ದ ಎಂ. ನಾಗೇಶ್ವರ್ ರಾವ್ ಅವರಿಗೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್ ನೀವು ಕೋರ್ಟ್ ಆದೇಶದೊಂದಿಗೆ ಆಟವಾಡಿದ್ದೀರಿ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಎ.ಕೆ. ಶರ್ಮಾರನ್ನು ವರ್ಗಾವಣೆ ಮಾಡಿದ ಬಗ್ಗೆ ವಿವರಿಸಲು ಫೆಬ್ರವರಿ 12ರಂದು ಕೋರ್ಟ್ ಗೆ ಹಾಜರಾಗುವಂತೆ ಎಂ. ನಾಗೇಶ್ವರ್ ರಾವ್ ಗೆ ಸುಪ್ರೀಂಕೋರ್ಟ್ ಸೂಚಿಸಿದೆ.


ಕೋರ್ಟ್‌ ಆದೇಶ ಉಲ್ಲಂಘಿಸಿ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದರ ಸಂಬಂಧ ಅಸಮಧಾನ ವ್ಯಕ್ತಪಡಿಸಿರುವ  ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, 'ನಮ್ಮ ಆದೇಶಗಳೊಂದಿಗೆ ನೀವು ಆಟವಾಡಿರುವಿರಿ. ದೇವರೇ ನಿಮ್ಮನ್ನು ಕಾಪಾಡಲಿ' ಎಂದಿದ್ದಾರೆ. 


ವರ್ಗಾವಣೆಗೆ ಸುಪ್ರೀಂ ಕೋರ್ಟ್‌ ನಿರ್ಬಂಧ ವಿಧಿಸಿದ್ದರೂ, ಬಿಹಾರದ ಬಾಲಿಕಾಗೃಹಗಳ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಎ.ಕೆ.ಶರ್ಮಾ ಅವರನ್ನು ಸಿಬಿಐನ ಅಂದಿನ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್‌ ವರ್ಗಾವಣೆ ಮಾಡಿದ್ದರು. 


'ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದ್ದರೂ, ಕೇಂದ್ರ ಸರ್ಕಾರ ಅವರನ್ನು ಹೇಗೆ ವರ್ಗಾವಣೆ ಮಾಡುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.