ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಇನ್ನು ರೈಲ್ವೆ ಪ್ರಯಾಣ ಅತಿ ಕಡಿಮೆ ಅವಧಿ ತೆಗೆದುಕೊಳ್ಳಲಿದ್ದು, ಚೆನೈನಿಂದ ಮೈಸೂರಿಗೆ ಬುಲೆಟ್ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. 


COMMERCIAL BREAK
SCROLL TO CONTINUE READING

ಅಹಮದಾಬಾದ್ ನಿಂದ ಮುಂಬೈವರೆಗೆ ಚಲಿಸುವ ಬುಲೆಟ್ ರೈಲು ಯೋಜನೆ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ. ಈ ಯೋಜನೆ 2023ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೀಗ ಈ ಯೋಜನೆಯನ್ನು ಕೇಂದ್ರ ಸರ್ಕಾರ ಆಗಸ್ಟ್ 15, 2022ರೊಳಗೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ. ಈ ಯೋಜನೆಗೆ ಜಪಾನ್ ಬಂಡವಾಳ ಹೂಡಿದೆ. ಆದರೆ ಈಗಿನ ಸಿಹಿ ಸುದ್ದಿ ಏನೆಂದರೆ, ಮೋದಿ ಸರ್ಕಾರ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಒಂದು ಹೊಸ ಬುಲೆಟ್ ರೈಲು ಸಂಚಾರ ಆರಂಭಿಸಲು ಯೋಜನೆ ರೂಪಿಸಲು ಸಿದ್ಧತೆ ನಡೆಸಿದೆ. 


ಈ ಯೋಜನೆಗೆ ಬರೋಬ್ಬರಿ 1 ಲಕ್ಷ ಕೋಟಿ ರೂ. ವೆಚ್ಚವಾಗಲಿದ್ದು, ಜರ್ಮನಿ ಈ ಯೋಜನೆಗೆ ಹಣಕಾಸು ನೀಡಲಿದೆ. ಐಎಎನ್ಎಸ್ ಸುದ್ದಿ ಸಂಸ್ಥೆಯು ಈ ಯೋಜನೆಯ ಬಗ್ಗೆ ವರದಿ ಮಾಡಿದ್ದು, ಯೋಜನೆಗೆ ಸಂಬಂಧಿಸಿದ 10 ವಿಶೇಷ ವಿಷಯಗಳನ್ನು ತಿಳಿಯೋಣ:


ಮುಖ್ಯಾಂಶಗಳು:
1. ಮೈಸೂರು-ಬೆಂಗಳೂರು-ಚೆನ್ನೈ ಕಾರಿಡಾರ್ ಯೋಜನೆಯ ಒಟ್ಟು ಉದ್ದ 435 ಕಿ.ಮೀ.
2. ರೈಲ್ವೆ ಸಚಿವಾಲಯದ ಅಧಿಕಾರಿಗಳ ಪ್ರಕಾರ, 435 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಸುಮಾರು 16 ಬಿಲಿಯನ್ ಡಾಲರ್ಗಳಷ್ಟು(ರೂ. 1 ಲಕ್ಷ ಕೋಟಿ) ವೆಚ್ಚವಾಗಲಿದೆ.
3. 435 ಕಿ.ಮೀ. ಉದ್ದದ ಈ ಮಾರ್ಗದ ಶೇ.84 ಭಾಗ ಮೇಲಿದ್ದು, ಶೇ.11 ಭಾಗ ಸುರಂಗ ಮಾರ್ಗವಾಗಿರಲಿದೆ.
4. ಈ ಬುಲೆಟ್ ರೈಲು 435 ಕಿ.ಮೀ.ಗಳ ಚೆನ್ನೈ-ಮೈಸೂರು ಮಾರ್ಗವನ್ನು ಕೇವಲ 2.25 ಗಂಟೆಗಳಲ್ಲಿ ಕ್ರಮಿಸಿದೆ. 
5. ಈ ರೈಲು ಪ್ರತಿ ಗಂಟೆಗೆ 320 ಕಿ.ಮೀ. ವೇಗದಲ್ಲಿ ಚಲಿಸಲಿದೆ.
6. ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಕಾರಿಡಾರ್ ಸಮೀಕ್ಷೆ ವರದಿ 18 ತಿಂಗಳುಗಳಲ್ಲಿ ಪೂರ್ಣಗೊಂಡಿದೆ.
7. "ಸಂಶೋಧನೆಯ ಮುಖ್ಯ ಫಲಿತಾಂಶವೆಂದರೆ ಈ ಮಾರ್ಗದಲ್ಲಿ ಹೆಚ್ಚಿನ ವೇಗದ ರೈಲು ಸಂಚಾರ ಕಾರ್ಯಸಾಧ್ಯವಾದರೂ ನಿರ್ವಹಣಾತ್ಮಕವಾಗಿಲ್ಲ" ಎಂದು ಜರ್ಮನಿಯ ಹೈ ಕಮೀಷನರ್ ಈ ವರದಿ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
8. ಭಾರತದಲ್ಲಿನ ಜರ್ಮನಿಯ ಹೈ ಕಮಿಷನರ್ ಮಾರ್ಟಿನ್ ಈ ವರದಿಯನ್ನು ರೈಲ್ವೆ ಮಂಡಳಿಯ ಅಧ್ಯಕ್ಷರಾದ ಅಶ್ವನಿ ಲೋಹಾನಿ ಅವರಿಗೆ ಸಲ್ಲಿಸಿದ್ದಾರೆ.
9. ಲೋಹಾನಿ ಅವರು ಈ ವರದಿಯನ್ನು ರೈಲ್ವೆ ಮಂತ್ರಾಲಯಕ್ಕೆ ಕಳುಹಿಸಿದ್ದಾರೆ.
10. ಮೈಸೂರು-ಬೆಂಗಳೂರು-ಚೆನ್ನೈ ಕಾರಿಡಾರ್ ಯೋಜನೆ ಬಗ್ಗೆ 2016ರಲ್ಲಿ ಜರಮಣಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿತ್ತು. ಎರಡು ವರ್ಷಗಳ ನಂತರ ಈಗ ಅದರ ಸಮೀಕ್ಷೆಯ ವರದಿ ಹೊರಬಂದಿದೆ. ಈ ಮಾರ್ಗದಲ್ಲಿ ಇತರ ರೈಲುಗಳ ವೇಗ ಹೆಚ್ಚಳದ ಬಗ್ಗೆಯೂ ಸಲಹೆ ನೀಡುವಂತೆ ಭಾರತೀಯ ಅಧಿಕಾರಿಗಳು ಜರ್ಮನಿಯ ಅಧಿಕಾರಿಗಳನ್ನು ಕೋರಿದ್ದರು.