ಚೆನ್ನೈ: ಎಐಎಡಿಎಂಕೆ ಯ 18 ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವ ಬಗ್ಗೆ ನಾಳೆ ಮದ್ರಾಸ್ ಹೈಕೋರ್ಟ್ ತುರ್ತು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. 


COMMERCIAL BREAK
SCROLL TO CONTINUE READING

ಮದ್ರಾಸ್ ಹೈಕೋರ್ಟ್ನಲ್ಲಿ ವಿಶ್ವಾಸ ಮತ ಯಾಚನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಅರ್ಜಿ ವಿಚಾರಣೆಯ ತೀರ್ಪು ಬರುವ ಮೊದಲೇ ತಮಿಳುನಾಡಿನ ಸ್ಪೀಕರ್  ಸೋಮವಾರ ಎಐಎಡಿಎಂಕೆ ಯ 18 ಶಾಸಕರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಈ ಕುರಿತಂತೆ ಅನರ್ಹಗೊಂಡ ಶಾಸಕರು ಮದ್ರಾಸ್ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ. ಇದರಿಂದಾಗಿ ಮದ್ರಾಸ್ ಹೈಕೋರ್ಟ್ನಲ್ಲಿ ನಡೆಯುತ್ತಿರುವ ತಮಿಳು ನಾಡು ಅಂತಃ ಕಲಹಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. 


ತಂಗ ತಮಿಳ್ಸೆಲ್ವನ್, ಸೆಂಥಿಲ್ ಬಾಲಾಜಿ, ಪಿ. ವೆತ್ರಿವೆಲ್ ಮತ್ತು ಕೆ. ಮರಿಅಪ್ಪನ್ ಮೊದಲಾದವರು ಅನರ್ಹಗೊಂಡ ಶಾಸಕರಾಗಿದ್ದಾರೆ. ದಿನಕರನ್ ಗೆ ನಿಷ್ಟರಾಗಿರುವ ಬಂಡಾಯ ಶಾಸಕರುಗಳು, ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಪಳನಿಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದರು.


ಈ ಮಧ್ಯೆ 1986 ರ ತಮಿಳುನಾಡು ವಿಧಾನ ಸಭೆ ಸದಸ್ಯರ ಪಕ್ಷದ ಪಕ್ಷಾಂತರ ಕಾನೂನಿನಡಿಯಲ್ಲಿ ಈ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ಅವರ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.


ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದಿನಕರನ್ ನ್ಯಾಯ ನಮ್ಮ ಪರ ಇದೆ, ನಮಗೆ ನ್ಯಾಯ ಸಿಕ್ಕೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಇದಕ್ಕೂ ಮೊದಲು ಆಡಳಿತಾರೂಢ ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸುವ ಸಾಧ್ಯತೆಯ ಬಗ್ಗೆ ಸ್ಪೀಕರ್ ಅವರಿಂದ ಬೆಂಬಲ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ದಿನಕರನ್ ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.


ಇದಕ್ಕೆ ಸಂಬಂಧಿಸಿದಂತೆ ಸೆ.20ರವರೆಗೂ ರಾಜ್ಯ ವಿಧಾನಸಭೆಯಲ್ಲಿ ಯಾವುದೇ ವಿಶ್ವಾಸ ಮತಯಾಚನೆ ಮಾಡಬಾರದೆಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.


ಕಳೆದ ವಾರ ಎಐಎಡಿಎಂಕೆಯ ಸಾಮಾನ್ಯ ಸಭೆಯಲ್ಲಿ ವಿ.ಕೆ.ಶಶಿಕಲಾ ಮತ್ತು ಟಿಟಿವಿ ದಿನಕರನ್ ಅನ್ನು ಪಕ್ಷದಿಂದ ವಜಾಗೊಳಿಸಿದ ಬಳಿಕ, ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸುವುದಾಗಿ ದಿನಕರನ್ ಎಚ್ಚರಿಕೆ ನೀಡಿದ್ದರು.


ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯೆ ಮದ್ರಾಸ್ ಹೈಕೋರ್ಟ್ ನಾಳೆಯೇ ತುರ್ತು ವಿಚಾರಣೆಗೆ ಕರೆದಿರುವುದು ತಮಿಳುನಾಡು ರಾಜಕೀಯ ಕಲಹ ನಿರ್ಣಾಯಕ ಘಟ್ಟ ತಲುಪಿರುವುದನ್ನು ಸೂಚಿಸುತ್ತಿದೆ.