ಶ್ರೀನಗರ: ಮಂಗಳವಾರ ಮುಂಜಾನೆ ಭಾರತೀಯ ವಾಯುಸೇನೆ ಪಿಒಕೆಯಲ್ಲಿ ದಾಳಿ ನಡೆಸಿ ಉಗ್ರರ ನೆಲೆಯನ್ನು ನಿರ್ನಾಮ ಮಾಡಿದರೆ, ಇತ್ತ ಮಂಗಳವಾರ ಬೆಳಗಿನ ಜಾವ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ ಶ್ರೀನಗರದಲ್ಲಿ 7 ಕಡೆ ದಾಳಿ ನಡೆಸಿದ್ದರು. ಪ್ರತ್ಯೇಕತಾವಾದಿಗಳ ಮನೆ ಮತ್ತು ಕಚೇರಿಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಉಗ್ರರಿಗೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರತ್ಯೇಕತಾವಾದಿಗಳಾದ ಯಾಸಿನ್​ ಮಲಿಕ್​, ಶಬೀರ್ ಶಾ, ಮಿರ್ವೈಜ್ ಉಮರ್ ಫಾರೂಕ್, ಮೊಹಮದ್​ ಅಶ್ರಫ್​ ಖಾನ್​​, ಮಸರತ್​ ಅಲಂ, ಜಫರ್​​ ಅಕ್ಬರ್​​ ಭಟ್​​, ನಸೀಂ ಗೀಲಾನಿ ಅವರ ಮನೆ ಮತ್ತು ಕಛೇರಿಗಳ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ತೀವ್ರ ಶೋಧದಲ್ಲಿ ತೊಡಗಿದ್ದರು.


ಶೋಧದ ವೇಳೆ ಭಾರೀ ಆಸ್ತಿ ಪತ್ರಗಳು, ಹಣಕಾಸು ರವಾನೆ ರಸೀದಿಗಳು, ಬ್ಯಾಂಕ್​ ಖಾತೆಗಳ ವಿವರ, ವಿವಿಧ ಭಯೋತ್ಪಾದನಾ ಸಂಘಟನೆಗಳ ಲೆಟರ್​​ ಹೆಡ್ ಗಳು, ಪಾಕಿಸ್ತಾನದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಬಯಸಿ ಕೋರಿಕೆ ಪತ್ರಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.


ಫೆ.20 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್ ಸುಬ್ರಮಣ್ಯಂ  ನೇತೃತ್ವದಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯಲ್ಲಿ, ಪ್ರತ್ಯೇಕವಾದಿ ನಾಯಕರಿಗೆ ಭದ್ರತೆ ನೀಡುವುದು ವ್ಯರ್ಥ ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ನಾಯಕರಾದ ಎಸ್ಎಎಸ್ ಗೀಲಾನಿ, ಅಘಾ ಸೈಯದ್, ಮೌಲ್ವಿ ಅಬ್ಬಾಸ್ ಅನ್ಸಾರಿ, ಯಾಸಿನ್ ಮಲಿಕ್, ಸಲೀಮ್ ಗಲಾನಿ, ಶಾಹಿದ್ ಉಲ್ ಇಸ್ಲಾಂ, ಜಾಫರ್ ಅಕ್ಬರ್ ಭಟ್, ನೈಮ್ ಅಹ್ಮದ್ ಖಾನ್, ಮುಖ್ತಾರ್ ಅಹ್ಮದ್ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು.


ಇದೀಗ ಇವರ ಮೇಲೆ ಎನ್ಐಎ ದಾಳಿ ನಡೆಸಿದ್ದು ಪ್ರತ್ಯೇಕತಾವಾದಿಗಳಿಗೆ ಶಾಕ್ ನೀಡಿದೆ.