ನವದೆಹಲಿ: ನಿರ್ಭಯಾ ಪ್ರಕರಣದ ಆರೋಪಿಗಳ ಗಲ್ಲುಶಿಕ್ಷೆಗೆ ತಡೆ ನೀಡಿರುವ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಇಂದು ಮಧ್ಯಾಹ್ನ ಈ ಅರ್ಜಿಯ ವಿಶೇಷ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮಧ್ಯಾಹ್ನ 3ಗಂಟೆಗೆ ಆರಂಭವಾದ ಈ ಅರ್ಜಿಯ ವಿಚಾರಣೆ ಸಂಜೆ 6ಗಂಟೆಯವರೆಗೆ ನಡೆದಿದೆ. ವಿಚಾರಣೆ ಬಳಿಕ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.


COMMERCIAL BREAK
SCROLL TO CONTINUE READING

ಆರೋಪಿಗಳ ಗಲ್ಲುಶಿಕ್ಷೆಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಮೇಲೆ ನಡೆದ ವಿಚಾರಣೆಯ ವೇಳೆ ವಾದ ಮಂಡಿಸಿರುವ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ನಿರ್ಭಯಾ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳಿಗೆ ಪ್ರತ್ಯೇಕವಾಗಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಪ್ರಕ್ರಿಯೆ ಇದೆ ರೀತಿ ಮುಂದುವರೆದರೆ ಪ್ರಕರಣದ ಅಂತ್ಯವಾಗುವುದಿಲ್ಲ ಮತ್ತು ನಿರ್ಭಯಾ ಅಪರಾಧಿಗಳು ಕಾನೂನಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದಿದ್ದಾರೆ.


ಈ ಸಂದರ್ಭದಲ್ಲಿ ವಾದ ಮಂಡಿಸಿರುವ ತುಷಾರ್ ಮೆಹ್ತಾ " ಸಮಾಜದ ಹಿತ ಮತ್ತು ಕಾನೂನಿನ ಹಿತ ಕಾಪಾಡುವ ನಿಟ್ಟಿನಲ್ಲಿ ಅಪರಾಧಿಗಳಿಗೆ  ನೀಡಲಾದ ಶಿಕ್ಷೆಯಲ್ಲಿ ಮತ್ತೆ ವಿಳಂಬ ಮಾಡಬಾರದು. ಸುಪ್ರೀಂ ಕೋರ್ಟ್ ಕಡೆಯಿಂದ ಒಂದು ಅಪರಾಧದ ಎಲ್ಲ ಅಪರಾಧಿಗಳ ಅರ್ಜಿಯ ಕುರಿತು ವಿಚಾರಣೆ ಪೂರ್ಣಗೊಳ್ಳುವದಿಲ್ಲವೋ ಅಲ್ಲಿಯವರೆಗೆ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಆದರೆ, ಎಲ್ಲ ದೋಷಿಗಳ ಅರ್ಜಿ ತಿರಸ್ಕೃತಗೊಂಡ ಬಳಿಕ ಬೇರೆ ಬೇರೆಯಾಗಿ ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬಹುದಾಗಿದ್ದು, ಏಕಕಾಲಕ್ಕೆ ಗಲ್ಲುಶಿಕ್ಷೆ ನೀಡುವ ಅನಿವಾರ್ಯತೆ ಇಲ್ಲ" ಎಂದು ಅವರು ವಾದಿಸಿದ್ದಾರೆ.


"ಕಾನೂನಿನ ಪ್ರಕಾರ ಎಲ್ಲಿಯವರೆಗೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ಪ್ರಕಟಿಸುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಅಪರಾಧಿಗಳಿಗೆ ಬೇರೆ ಬೇರೆಯಾಗಿ ಗಲ್ಲುಶಿಕ್ಷೆ ನೀಡುವುದು ಸಾಧ್ಯವಿಲ್ಲ. ಆದರೆ, ಒಂದು ವೇಳೆ ಅವರು ರಾಷ್ಟ್ರಪತಿಗಳ ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಿದರೆ, ಈ ನಿಯಮಕ್ಕೆ ಅರ್ಥ ಉಳಿಯುವುದಿಲ್ಲ. ಒಂದು ವೇಳೆ ರಾಷ್ಟ್ರಪತಿಗಳು ಅಪರಾಧಿಗಳು ಸಲ್ಲಿಸಿರುವ ದಯೆಯ ಅರ್ಜಿಯನ್ನು ತಿರಸ್ಕರಿಸಿದರೆ ಆರೋಪಿಗಳಿಗೆ ಬೇರೆ ಬೇರೆಯಾಗಿ ಗಲ್ಲುಶಿಕ್ಷೆ ನೀಡಬಹುದು" ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.


"ಹೈದ್ರಾಬಾದ್ ನಲ್ಲಿ ಪೊಲೀಸರು ಅತ್ಯಾಚಾರದ ಆರೋಪಿಗಳ ಎನ್ಕೌಂಟರ್ ನಡೆಸಿದ್ದ ವೇಳೆ ದೇಶಾದ್ಯಂತ ಸಂತಸದ ವಾತಾವರಣ ನಿರ್ಮಾಣಗೊಂಡು ಒಂದು ಅಪಾಯಕಾರಿ ಸಂದೇಶ ಕೂಡ ಹೊರಬಂದಿತ್ತು. ಏಕೆಂದರೆ ಈ ಎನ್ಕೌಂಟರ್ ಸರಿ ಅಥವಾ ತಪ್ಪು ಎಂಬುದು ಇನ್ನೂ ನಿರ್ಣಯವಾಗಬೇಕಿದೆ. ಆದರೆ, ಒಂದು ವೇಳೆ ಪ್ರಕರಣ ನ್ಯಾಯಾಲಯ ಸೇರಿದರೆ, ನಿರ್ಭಯಾ ಪ್ರಕರಣದಂತೆ ತೀರ್ಪು ಹೊರಬೀಳಲು ವರ್ಷಾನುವರ್ಷಗಳೇ ಬೇಕಾಗುತ್ತದೆ ಎಂಬುದು ಜನರ ಅನಿಸಿಕೆಯಾಗಿದೆ" ಎಂದು ಅವರು ಹೇಳಿದ್ದಾರೆ.


ಈ ಪ್ರಕರಣದಲ್ಲಿ ಮುಕೇಶ್ ಓರ್ವ ದೋಷಿಯಾಗಿದ್ದು, SLP ತಿರಸ್ಕೃತಗೊಂಡ 250 ದಿನಗಳ ಬಳಿಕ ಆತ ಕ್ಯೂರೆಟಿವ್ ಅರ್ಜಿ ದಾಖಲಿಸಿದ್ದಾನೆ. ಇಲ್ಲಿ ಪ್ರಕರಣದಲ್ಲಿ ವಿಳಂಬವಾಗಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಇನ್ನೋರ್ವ ಅಪರಾಧಿ ಅಕ್ಷಯ್ ನನ್ನು ಕೂಡ ಸುಪ್ರೀಂ ಕೋರ್ಟ್ ಮೇ 2017ರಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು. ಇದರಲ್ಲೂ ಕೂಡ ನೀವು ವಿಳಂಬವನ್ನು ಗಮನಿಸಬಹುದು. ಅಪರಾಧಿಗಳ ಪರ ವಕೀಲರು ನಿರಂತರವಾಗಿ ಅರ್ಜಿಗಳನ್ನು ದಾಖಲಿಸಿ ಗಲ್ಲುಶಿಕ್ಷೆಗೆ ತಡೆ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ವಿನಯ್ ಪ್ರಕರಣದಲ್ಲಿಯೂ ಕೂಡ 225 ದಿನಗಳ ಬಳಿಕ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗಿದ್ದು,ರಾಷ್ಟ್ರಪತಿಗಳೂ ಕೂಡ ಆತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಮತ್ತೋರ್ವ ಅಪರಾಧಿ ಪವನ್ ಕೂಡ 225 ದಿನಗಳ ಬಳಿಕ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿದ್ದು, ಇನ್ನೂ ಕ್ಯುರೆಟಿವ್ ಪಿಟಿಷನ್ ದಾಖಲಿಸಿಲ್ಲ. ಎಲ್ಲಿಯವರೆಗೆ ಅಪರಾಧಿಗಳು ಪುನರ್ ಪರಿಶೀಲನಾ ಅರ್ಜಿ ಹಾಗೂ ಕ್ಯುರೆಟಿವ್ ಪಿಟಿಷನ್ ದಾಖಲಿಸುವುದಿಲ್ಲವೋ ಅಲ್ಲಿಯವರೆಗೆ ಅವರನ್ನು ಯಾರೂ ಗಲ್ಲಿಗೆರಿಸುವುದು ಸಾಧ್ಯವಿಲ್ಲ ಎಂಬುದಾಗಿ ಅಪರಾಧಿಗಳು ಭಾವಿಸುತ್ತಿದ್ದಾರೆ" ಎಂದು ಸಾಲಿಸಿಟರ್ ಜನರಲ್ ವಾದ ಮಂಡಿಸಿದ್ದಾರೆ.