ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರದ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದಿನಾಂಕ ನಿಗದಿಯಾಗಿದೆ. ಈ ಎಲ್ಲ ಅಪರಾಧಿಗಳಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಇಂದು ಸಂಜೆ 4ಗಂಟೆಗೆ ಕೈಗೆತ್ತಿಕೊಂಡ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ, ನಾಲ್ವರು ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿದ್ದು, ಜನವರಿ ೨೨, ೨೦೨೦ ಬೆಳಗ್ಗೆ ೭ಗಂಟೆಯ ಸುಮಾರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

ಇಂದು ಈ ಪ್ರಕರಣದ ವಿಚಾರಣೆಯ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಕೋರ್ಟ್ ರೂಂ ನಿಂದ ಹೊರಗಡೆ ಕಳುಹಿಸಲಾಗಿತ್ತು. ಅಷ್ಟೇ ಅಲ್ಲ ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಹೊರಗಡೆ ಅರೆಸೇನಾಪಡೆಯ ಜವಾನರನ್ನು ನಿಯೋಜಿಸಲಾಗಿತ್ತು. ಇದಕ್ಕೂ ಮೊದಲು ನಿರ್ಭಯಾ ಪರ ವಕೀಲರು, ನಿರ್ಭಯಾ ಅವರ ಪೋಷಕರು ಹಾಗೂ ಆರೋಪಿಗಳ ಪರ ವಕೀಲರು ಮಂಡಿಸಿದ್ದ ವಾದವನ್ನು ಆಲಿಸಿದ್ದ ನ್ಯಾಯಪೀಠ ತೀರ್ಪನ್ನು ಮಧ್ಯಾಹ್ನ ೩.೩೦ಕ್ಕೆ ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ೪.೪೫ಕ್ಕೆ ಡೆತ್ ವಾರೆಂಟ್ ಜಾರಿಗೊಳಿಸಿರುವ ನ್ಯಾಯಪೀಠ, ಅಪರಾಧಿಗಳಾದ ಮುಕೇಶ್, ಪವನ್, ವಿನಯ್ ಹಾಗೂ ಅಕ್ಷಯ್ ಅವರ ಗಲ್ಲು ಶಿಕ್ಷೆಗೆ ಜನವರಿ ೨೨, ೨೦೨೦ಕ್ಕೆ ಅಂದರೆ ಬುಧವಾರ ಬೆಳಗ್ಗೆ ೭ಗಂಟೆಗೆ ಸಮಯ ನಿಗದಿಗೊಳಿಸಿ ಆದೇಶ ನೀಡಿದೆ.


ವಿಚಾರಣೆಯ ವೇಳೆ ಮೊದಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಿಹಾರ್ ಜೈಲಿನ ಜೈಲು ಸಂಖ್ಯೆ 4ರಿಂದ ವಿನಯ್ ನನ್ನು ಹಾಜರುಪಡಿಸಲಾಗಿದೆ. ಈತನ ಜೊತೆಗೆ ಜೈಲು ಸಂಖ್ಯೆ 2ರಿಂದ ಅಕ್ಷಯ್, ಮುಕೇಶ್ ಹಾಗೂ ಪವನ್ ಇವರುಗಳನ್ನು ಕೂಡ ಹಾಜರುಪಡಿಸಲಾಗಿತ್ತು.