ನಿರ್ಭಯಾ ಪ್ರಕರಣ: `ಹತ್ಯಾ`ಚಾರಿ ಅಕ್ಷಯ್ ಸಿಂಗ್ಗೂ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ
![ನಿರ್ಭಯಾ ಪ್ರಕರಣ: 'ಹತ್ಯಾ'ಚಾರಿ ಅಕ್ಷಯ್ ಸಿಂಗ್ಗೂ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ ನಿರ್ಭಯಾ ಪ್ರಕರಣ: 'ಹತ್ಯಾ'ಚಾರಿ ಅಕ್ಷಯ್ ಸಿಂಗ್ಗೂ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಸುಪ್ರೀಂ](https://kannada.cdn.zeenews.com/kannada/sites/default/files/styles/zm_500x286/public/2019/12/18/183169-nirbhaya-gfx.png?itok=TfY5oiPW)
ನಿರ್ಭಯಾ ಪ್ರಕರಣದಲ್ಲಿ ದೋಷಿ ಅಕ್ಷಯ್ ಸಿಂಗ್ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅಕ್ಷಯಗೂ ಸಹ ಗಲ್ಲು ಶಿಕ್ಷೆ ಖಾಯಂಗೊಳಿಸಿ ತೀರ್ಪು ಪ್ರಕಟಿಸಿದೆ.
ನವದೆಹಲಿ: ನಿರ್ಭಯಾ ಪ್ರಕರಣಕ್ಕೆ ಸಂಬಂಧಿದಂತೆ ಸುಪ್ರೀಂ ಕೋರ್ಟ್ ಇಂದು ದೋಷಿ ಅಕ್ಷಯ್ ಸಿಂಗ್ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿ ಆರ್. ಅನುಭೂತಿ ನೇತೃತ್ವದ ತ್ರಿಸದಸ್ಯ ಪೀಠ ಈ ಪ್ರಕರಣದಲ್ಲಿ ತನ್ನ ಅಂತಿಮ ತೀರ್ಪು ಪ್ರಕಟಿಸಿದ್ದು ಆರೋಪಿ ಅಕ್ಷಯ್ ಕುಮಾರ್ ಸಿಂಗ್ ಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಎತ್ತಿ ಹಿಡಿದಿದೆ. ಈ ಪೀಠದಲ್ಲಿ ನ್ಯಾ. ಅನುಭೂತಿಯ ಹೊರತುಪಡಿಸಿ ನಾ. ಅಶೋಕ್ ಭೂಷಣ್ ಹಾಗೂ ಎ.ಎಸ್ ಬೋಪಣ್ಣ ಇದ್ದರು. ಈ ಪ್ರಕರಣದಲ್ಲಿ ವಕೀಲ ಎ.ಪಿ. ಸಿಂಗ್ ಅಕ್ಷಯ್ ಪರ ವಾದ ಮಂಡಿಸಿದ್ದಾರೆ. ಇದಕ್ಕೂ ಮೊದಲು ಅವರಿಗೆ ವಾದ ಮಂಡಿಸಲು 30 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಅವರ ವಾದವನ್ನು ತಿರಸ್ಕರಿಸಿರುವ ಸುಪ್ರೀಂ ತ್ರಿಸದಸ್ಯ ಪೀಠ, ಅಕ್ಷಯಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿ ತೀರ್ಪು ಪ್ರಕಟಿಸಿದೆ.
ಇದಕ್ಕೂ ಮೊದಲು ಅಕ್ಷಯ್ ಪರ ವಾದ ಮಂಡಿಸಿದ್ದ ಅವರ ಪರ ವಕೀಲ ಎ.ಪಿ.ಸಿಂಗ್, ಈ ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಗಳನ್ನು ಸಲ್ಲಿಸಲಾಗಿಲ್ಲ ಹಾಗೂ CBI ತನಿಖೆಯನ್ನೂ ಕೂಡ ನಡೆಸಲಾಗಿಲ್ಲ. ಅಲ್ಲದೆ ಈ ಪ್ರಕರಣದ ಏಕೈಕ ಪ್ರತ್ಯಕ್ಷ ಸಾಕ್ಷಿಯಾಗಿರುವ ನಿರ್ಭಯಾ ಸ್ನೇಹಿತ ಮಾಧ್ಯಮದವರಿಂದ ಹಣಪಡೆದು ಸಂದರ್ಶನ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಮ್ಮ ಕಕ್ಷಿದಾರ ಅಕ್ಷಯ್ ಅವನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಇನ್ನೊಂದೆಡೆ ಅಕ್ಷಯ್ ಗೆ ಗಲ್ಲು ಶಿಕ್ಷೆ ನೀಡುವಲ್ಲಿ ದೆಹಲಿ ಸರ್ಕಾರ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ದೆಹಲಿ ಸರ್ಕಾರದ ರಾಜಕೀಯ ಹಿತಾಸಕ್ತಿಗೋಸ್ಕರ ಮರಣದಂಡನೆ ವಿಧಿಸುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದಾರೆ. ಪ್ರಕರಣದ ಸಂತ್ರಸ್ತೆ ಕೊನೆಯುಸಿರೆಳೆಯುವ ಮುನ್ನ ಸ್ವಯಂಸಾಕ್ಷ್ಯ ನೀಡಿದ್ದು, ಅದರಲ್ಲಿ ಅವಳು ಅಕ್ಷಯ್ ಸಿಂಗ್ ಆರೋಪಿಯಾಗಿದ್ದಾನೆ ಎಂದು ಹೇಳಿಲ್ಲ.
ಇನ್ನೊಂದೆಡೆ ಗಲ್ಲುಶಿಕ್ಷೆ ಒಂದು ಹಳೆ ಕಾಲದ ಶಿಕ್ಷೆಯಾಗಿದ್ದು, ಇದು ಕೇವಲ ದೋಷಿಗಳನ್ನು ಕೊಲ್ಲುತ್ತದೆ ವಿನಾ ಅವರು ಮಾಡಿರುವ ದೋಷಗಳನ್ನು ಅಲ್ಲ. ಹೀಗಾಗಿ ಇಂತಹ ಪ್ರಾಚೀನ ಕಾಲದ ಶಿಕ್ಷೆಯನ್ನು ಅನೂರ್ಜಿತಗೊಳಿಸಿ, ತಮ್ಮ ಕಕ್ಷಿದಾರನಿಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಮರುಪರಿಶೀಲಿಸಬೇಕು ಎಂದು ಎ.ಪಿ ಸಿಂಗ್ ವಾದ ಮಂಡಿಸಿದ್ದಾರೆ.
ಈಗಾಗಲೇ ಈ ಪ್ರಕರಣದ ಇತರೇ ಮೂವರು ಆರೋಪಿಗಳು ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ತಿರಸ್ಕರಿಸಿದೆ. ಹೀಗಾಗಿ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳ ಗಲ್ಲುಶಿಕ್ಷೆ ಖಾಯಂ ಆಗಿದಂತಾಗಿದೆ. ಈ ತೀರ್ಪಿನ ಬಳಿಕ ಇದೀಗ ಆರೋಪಿಗಳ ಬಳಿ ಸುಪ್ರೀಂಕೋರ್ಟ್ ನಲ್ಲಿ ಕ್ಯೂರೆಟಿವ್ ಪಿಟಿಷನ್ ದಾಖಲಿಸುವ ಅಧಿಕಾರವಿದೆ. ಅವರು, ರಾಷ್ಟ್ರಪತಿಗಳ ಬಳಿ ದಯಾ ಅರ್ಜಿ ಕೂಡ ದಾಖಲಿಸಬಹುದಾಗಿದೆ. ಈ ಅರ್ಜಿ ದಾಖಲಿಸಲು ಅಕ್ಷಯ್ ಪರ ವಕೀಲ ಸುಪ್ರೀಂ ಬಳಿ ಮೂರು ವಾರಗಳ ಸಮಯಾವಕಾಶ ಕೋರಿದ್ದಾರೆ.
ಇದಕ್ಕೆ ಪ್ರತಿವಾದ ಮಂಡಿಸಿರುವ ನಿರ್ಭಯಾ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಲ್ಲಿ ವಿಳಂಬ ಮಾಡುವುದಕ್ಕಾಗಿ ಆರೋಪಿ ಪರ ವಕೀಲರು ಪ್ರಯತ್ನಿಸುತ್ತಿದ್ದು, ಇಂತಹ ಭೀಕರ ಕೃತ್ಯಕ್ಕೆ ಕೈಹಾಕಿರುವ ಯಾವುದೇ ಅಪರಾಧಿಗೆ ದಯೆ ಅಥವಾ ಕರುಣೆ ತೋರಿಸಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಎಲ್ಲ ದಾಖಲೆಗಳು, ಸಾಕ್ಷ್ಯಗಳು ಹಾಗೂ ಅವುಗಳಿಗೆ ಸಂಬಂಧಿಸಿ ನಡೆದ ವಾದಗಳೆಲ್ಲವೂ ಕಾನೂನುಬದ್ಧವಾಗಿವೆ. ಹೀಗಾಗಿ ನೀಡಿರುವ ಶಿಕ್ಷೆಯನ್ನು ಮರುಪರಿಶೀಲಿಸುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.