ಇಂದಿರಾ ಗಾಂಧಿಯನ್ನು ಪ್ರಶಂಸಿಸಿ ನಿತಿನ್ ಗಡ್ಕರಿ ಹೇಳಿದ್ದೇನು?
ತಾವೆಂದೂ ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ. ಆದರೆ ಜಾತಿ ಮತ್ತು ಧರ್ಮಗಳನ್ನು ಆಧರಿಸಿದ ರಾಜಕೀಯವನ್ನು ವಿರೋಧಿಸುವುದಾಗಿ ಗಡ್ಕರಿ ಹೇಳಿದರು.
ನಾಗ್ಪುರ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಯಾವುದೇ ಮಹಿಳಾ ಮೀಸಲಾತಿಯ ಅಗತ್ಯ ಬೀಳಲಿಲ್ಲ. ಅವರು ಕಾಂಗ್ರೆಸ್ ಪಕ್ಷದಲ್ಲಿನ ಪುರುಷ ನಾಯಕರಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶ್ಲಾಘಿಸಿದರು.
ಮಹಿಳಾ ಸ್ವ-ಸಹಾಯ ಸಂಘಗಳು ಭಾನುವಾರ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವೆಂದೂ ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ. ಆದರೆ ಜಾತಿ ಮತ್ತು ಧರ್ಮಗಳನ್ನು ಆಧರಿಸಿದ ರಾಜಕೀಯವನ್ನು ವಿರೋಧಿಸುವುದಾಗಿ ಗಡ್ಕರಿ ಹೇಳಿದರು.
"ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಸ್ವಸಾಮರ್ಥ್ಯದಿಂದ ಸಾಧನೆ ಮಾಡಿದರು. ಕಾಂಗ್ರೆಸ್ ಪಕ್ಷದ ಪುರುಷ ನಾಯಕರನ್ನೂ ಮೀರಿಸುವಂತೆ ಸಾಮರ್ಥ್ಯ ಮೆರೆದರು. ಅವರೇನು ಮಹಿಳಾ ಮೀಸಲಾತಿಯಿಂದ ಸಾಧನೆ ಮಾಡಿದರೇ? ಎಂದು ಪ್ರಶ್ನಿಸಿದ ನಿತಿನ್ ಗಡ್ಕರಿ, ಬಿಜೆಪಿ ನಾಯಕಿಯರಾದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಯಾವುದೇ ಮೀಸಲಾತಿ ಇಲ್ಲದೇ ರಾಜಕೀಯದಲ್ಲಿ ಸಾಧನೆ ಮಾಡಿದ್ದಾರೆ" ಎಂದು ಪ್ರಶಂಸಿಸಿದರು.
ಮುಂದುವರೆದು ಮಾತನಾಡಿದ ಅವರು, "ಕೆಲವರು ತಮ್ಮ ಜ್ಞಾನದ ಆಧಾರದ ಮೇಲೆ ಪ್ರಗತಿ ಸಾಧಿಸುತ್ತಾರೆ. ಸಾಯಿಬಾಬಾ, ಗಜಾನನ್ ಮಹಾರಾಜ್ ಅಥವಾ ಸಂತ ತುಕ್ಡೊಜಿ ಮಹಾರಾಜರ ಧರ್ಮದ ಬಗ್ಗೆ ನಾವು ಪ್ರಶ್ನಿಸುತ್ತಿವಾ? ಛತ್ರಪತಿ ಶಿವಾಜಿ ಮಹಾರಾಜ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಥವಾ ಜ್ಯೋತಿಬಾ ಫುಲೆ ಅವರು ಯಾವ ಜಾತಿಗೆ ಸೇರಿದವರು ಎಂದು ಪ್ರಶ್ನಿಸಿದ್ದೇವೆಯೇ? ಇಲ್ಲ... ಎಂದ ನಿತಿನ್ ಗಡ್ಕರಿ, "ನಾನು ಮಹಿಳಾ ಮಿಸಲಾತಿ ವಿರೋಧಿಯಲ್ಲ. ಮಹಿಳೆಯರಿಗೆ ಮೀಸಲಾತಿಯ ಅಗತ್ಯವಿದೆ. ಆದರೆ ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ನಡೆಯುವ ರಾಜಕೀಯವನ್ನು ವಿರೋಧಿಸುತ್ತೇನೆ" ಎಂದು ಹೇಳಿದರು.