ನವದೆಹಲಿ: ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆಯನ್ನು ಎನ್‌ಡಿಎ ಒಕ್ಕೂಟ ನಿತೀಶ್ ಕುಮಾರ್ ನೇತೃತ್ವದಲ್ಲೇ ಎದುರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದರು. 


COMMERCIAL BREAK
SCROLL TO CONTINUE READING

ಘರೌನಾ ಪೋಖರ್ ಮೈದಾನದಲ್ಲಿ ಗುರುವಾರ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆಗೆ ಬೆಂಬಲ ನೀಡುವ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ,ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ನಿತೀಶ್ ಕುಮಾರ್ ಅವರು ಎನ್ಡಿಎ  ಮುನ್ನಡೆಸಲಿದ್ದಾರೆ ಎಂದು ಹೇಳಿದರು. 'ಬಿಹಾರದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ನಡೆಯಲಿದೆ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಎಲ್ಲಾ ವದಂತಿಗಳನ್ನು ಕೊನೆಗೊಳಿಸಲು ನಾನು ಬಯಸುತ್ತೇನೆ' ಎಂದು ಶಾ ಹೇಳಿದರು.


ಇದೇ ವೇಳೆ ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡು, ಎನ್‌ಡಿಎ ರಾಜ್ಯವನ್ನು 'ಜಂಗಲ್ ರಾಜ್' ದಿಂದ 'ಜನತಾ ರಾಜ್' (ಜನರ ಆಡಳಿತ)ವನ್ನು 2005 ರಿಂದ 2020 ರವರೆಗೆ ಮುನ್ನಡೆಸಿದೆ ಎಂದು ಹೇಳಿದರು. ಜೆಡಿಯು ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ಶಾ ತಳ್ಳಿ ಹಾಕಿದರು. ಪ್ರತಿ ಪಕ್ಷದಲ್ಲಿರುವವರು ಮುಖ್ಯಮಂತ್ರಿಯಾಗಬೇಕೆಂಬ ಕನಸು ಸಾಕಾರಗೊಳ್ಳುವುದಿಲ್ಲ ಎಂದು ಶಾ ವ್ಯಂಗ್ಯವಾಡಿದರು.


ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎಯನ್ನು ವಿರೋಧಿಸಿ ಭಾರತದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.