ಪೊಲೀಸರು ಮತ್ತು ಬಿಎಸ್ಎಫ್ ಬಳಿ ಡ್ರೋನ್ ಡಿಟೆಕ್ಟರ್ ಇಲ್ಲ; ಪಂಜಾಬ್ ಸಚಿವ
ಸೆಪ್ಟೆಂಬರ್ನಲ್ಲಿ 4 ದಿನಗಳಲ್ಲಿ 8 ಬಾರಿ ಡ್ರೋನ್ ಮೂಲಕ ಪಂಜಾಬ್ ಗಡಿಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ತೆಗೆದುಹಾಕುವ ಮೂಲಕ ಉತ್ತೇಜಿತವಾದ ಪಾಕಿಸ್ತಾನವು ಈಗ ಕಣಿವೆಯಲ್ಲಿ ತನ್ನ ಭಯೋತ್ಪಾದಕ ಸಂಚು ನಡೆಸಲು ಪಂಜಾಬ್ ಮಾರ್ಗವನ್ನು ಬಳಸುತ್ತಿದೆ. ಭಾರತದ ವಿರುದ್ಧ ನಿರಂತರ ಭಯೋತ್ಪಾದಕ ಪಿತೂರಿಯಲ್ಲಿ ತೊಡಗಿರುವ ಪಾಕಿಸ್ತಾನ ಈಗ ಪಂಜಾಬ್‌ನಲ್ಲಿ ಡ್ರೋನ್‌ಗಳ ಮೂಲಕ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಕಳುಹಿಸುವಲ್ಲಿ ನಿರತವಾಗಿದೆ ಎಂದು ತನಿಖಾ ಸಂಸ್ಥೆಗಳಿಂದ ವರದಿಯಾಗಿದೆ.
ಈ ವಿಷಯದ ಬಗ್ಗೆ ಪಂಜಾಬ್ ಸರ್ಕಾರದ ಕ್ಯಾಬಿನೆಟ್ ಸಚಿವ ಸುಖ್ಜಿಂದರ್ ರಾಂಧವಾ ಮಾತನಾಡಿ, ಪಾಕಿಸ್ತಾನ ಯಾವಾಗಲೂ ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿದೆ. ನೆರೆಯ ದೇಶದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗುತ್ತಿದೆ. ಆದರೆ ರಾಜ್ಯ ಪೊಲೀಸರು ಮತ್ತು ಬಿಎಸ್‌ಎಫ್‌ನಲ್ಲಿ ಡ್ರೋನ್ ಡಿಟೆಕ್ಟರ್(ಡ್ರೋನ್ ಸೆರೆಹಿಡಿಯುವ ಉಪಕರಣ) ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶೀಘ್ರದಲ್ಲೇ ಗೃಹ ಸಚಿವಾಲಯವನ್ನು ಭೇಟಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಾಕಿಸ್ತಾನದ ಡ್ರೋನ್‌ಗಳು ಭಾರತದ ಗಡಿಯಲ್ಲಿ ಪ್ರವೇಶಿಸಿದ ಅನೇಕ ಪ್ರಕರಣಗಳು ನಡೆದಿವೆ ಎಂಬುದು ಗಮನಾರ್ಹ. ಈ ವರ್ಷದ ಏಪ್ರಿಲ್‌ನಲ್ಲಿ ಪಂಜಾಬ್‌ನ ಟಾರ್ನ್ ತರಣ್‌ನ ಖೇಂಕರನ್ ಸೆಕ್ಟರ್‌ನ ಬಿಒಪಿ (ಬಾರ್ಡರ್ ಔಟ್ ಪೋಸ್ಟ್) ನಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್ಎಫ್ ಹೊಡೆದುರುಳಿಸಿತ್ತು. ಗಡಿಯ ಪಕ್ಕದಲ್ಲಿರುವ ರಾಟೋಕೆ ಗ್ರಾಮದಲ್ಲಿ ಒಂದು ದಿನ ರಾತ್ರಿ ಪಾಕಿಸ್ತಾನದ ಡ್ರೋನ್ ಅನ್ನು ಕಂಡ ಬಿಎಸ್‌ಎಫ್ ತಕ್ಷಣ ಕ್ರಮ ಕೈಗೊಂಡು ವಾಯುದಾಳಿಯ ಬಂದೂಕಿನಿಂದ ಹೊಡೆದುರುಳಿಸಿತ್ತು.
ಈ ಹಿಂದೆ ರಾಜಸ್ಥಾನದಲ್ಲಿ ಪಾಕಿಸ್ತಾನದ ಡ್ರೋನ್ ಪ್ರವೇಶದ ಬಗ್ಗೆಯೂ ಮಾಹಿತಿ ಇತ್ತು. ಆದರೆ, ಭಾರತೀಯ ಸೇನೆ ಅದನ್ನು ಸದೆಬಡೆಯಿತು. ಇದಕ್ಕೂ ಮುನ್ನ ಮಾರ್ಚ್ 10 ರಂದು ರಾಜಸ್ಥಾನದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಭಾರತದ ಗಡಿಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ನಾಶಮಾಡಿತ್ತು.