ಲಕ್ನೋ: ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಬಹುಜನ ಸಮಾಜವಾದಿ ಪಕ್ಷದ(ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಸೋಮವಾರ ದೆಹಲಿಯಲ್ಲಿ ಎಐಸಿಸಿ ವರಿಷ್ಠೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸುತ್ತಾರೆ ಎಂಬ ಊಹಾಪೋಹಗಳಿಗೆ ಬಿಎಸ್​ಪಿ ನಾಯಕ ಸತೀಶ್ ಚಂದ್ರ ಮಿಶ್ರಾ ತೆರೆ ಎಳೆದಿದ್ದು, ಮಾಯಾವತಿ ಇಂದು ಲಕ್ನೋದಲ್ಲಿಯೇ ಇರಲಿದ್ದು, ದೆಹಲಿಯಲ್ಲಿ ಯಾವುದೇ ಸಭೆಯಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING


ಬಿಎಸ್​ಪಿ ನಾಯಕ ಎಸ್.ಸಿ. ಮಿಶ್ರಾ:
ವಾಸ್ತವವಾಗಿ, ಬಿಎಸ್​ಪಿ ನಾಯಕ ಎಸ್.ಸಿ. ಮಿಶ್ರಾ ಸುದ್ದಿ ಸಂಸ್ಥೆ ಎಎನ್ಐ ಜೊತೆಗೆ ಮಾತನಾಡಿದ್ದು, ಮಾಯಾವತಿಯವರು ಸೋಮವಾರ ದೆಹಲಿಯಲ್ಲಿ ಪ್ರತಿಪಕ್ಷಗಳೊಂದಿಗೆ ಸಭೆ ನಡೆಸಲಿರುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮಾಯಾವತಿಯವರು ಸೋಮವಾರ ಲಕ್ನೋದಲ್ಲಿ ಇರಲಿದ್ದು, ದೆಹಲಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಿಗದಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಮೇಲೆ ಆಕ್ರಮಣ:
ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ನಿರಂತರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಆಕ್ರಮಣ ಮಾಡಿದ್ದ ಮಾಯಾವತಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಆರ್ ಎಲ್ ಡಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರು. ಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಹೊರಗಿಟ್ಟಿದ್ದರು. ಆದಾಗ್ಯೂ, ರಾಹುಲ್ ಹಾಗೂ ಸೋನಿಯಾ ಸ್ಪರ್ಧಿಸುವ ಅಮೇಥಿ ಮತ್ತು ರಾಯಬರೇಲಿಯಲ್ಲಿ ಕಾಂಗ್ರೆಸಿಗೆ ಮತ ಚಲಾಯಿಸುವಂತೆ ಎಸ್​ಪಿ-ಬಿಎಸ್​ಪಿ ಮೈತ್ರಿಕೂಟ ಕಾರ್ಯಕರ್ತರಿಗೆ ತಿಳಿಸಿತ್ತು.