ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲ್ಲ, ಪ್ರಾದೇಶಿಕ ಪಕ್ಷಗಳಿಂದ ಪ್ರಧಾನಿ ಆಯ್ಕೆ: ರಾಮಗೋಪಾಲ್ ಯಾದವ್
ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ-ಆರ್ ಎಲ್ಡಿ ಮಹಾಮೈತ್ರಿ ಹೆಚ್ಚು ಶಕ್ತಿಯುತವಾಗಿದೆ ಎಂದ ಯಾದವ್, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಒಂದು ಅಥವಾ ಎರಡು ಸ್ಥಾನಗಳನ್ನು ಗೆದ್ದರೆ ಅದೇ ಹೆಚ್ಚು ಎಂದು ರಾಮಗೋಪಾಲ್ ಯಾದವ್ ಹೇಳಿದ್ದಾರೆ.
ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಗಳಿಸುವುದಿಲ್ಲ, ಪ್ರಾದೇಶಿಕ ಪಕ್ಷಗಳಿಂದ ಪ್ರಧಾನಿ ಆಯ್ಕೆ ಆಗುತ್ತದೆ ಎಂದು ಸಮಾಜವಾದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೊ.ರಾಮಗೋಪಾಲ ಯಾದವ್ ಹೇಳಿದ್ದಾರೆ.
ಮೊದಲ ಹಂತದ ಮತದಾನಕ್ಕೆ ಕೆಲವೇ ದಿನ ಉಳಿದಿರುವ ಹಿನ್ನೆಲೆಯಲ್ಲಿ ಜೀ ನ್ಯೂಸ್ ಜೊತೆ ಮಾತನಾಡಿದ ರಾಮಗೋಪಾಲ್ ಯಾದವ್, ಚುನಾವಣೆ ಬಳಿಕ ಪ್ರಧಾನಿ ಯಾರಾಗುತ್ತಾರೆ ಎಂಬ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದು, ಪ್ರಾದೇಶಿಕ ಪಕ್ಷಗಳಿಂದಲೇ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದಿದ್ದಾರೆ.
ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕಾಂಗ್ರೆಸ್
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಶೇಷ ಪ್ರಾಧಾನ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ಎಸ್ಪಿ-ಬಿಎಸ್ಪಿ ಮತ್ತು ಆರ್ಎಲ್ಡಿ ಮೈತ್ರಿಯೊಂದಿಗೆ ಕಾಂಗ್ರೆಸ್ ಯಾವುದೇ ಉತ್ತಮ ಕೆಲಸ ಮಾಡಲಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರಗಿಟ್ಟಿದ್ದೇವೆ. ಅಮೇಥಿ ಮತ್ತು ರಾಯ್'ಬರೇಲಿ ಕ್ಷೇತ್ರಗಳನ್ನು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದು, ಎಸ್ಪಿ-ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ ಮಹಾಮೈತ್ರಿ ಹವಾ
ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ-ಆರ್ ಎಲ್ಡಿ ಮಹಾಮೈತ್ರಿ ಹೆಚ್ಚು ಶಕ್ತಿಯುತವಾಗಿದೆ ಎಂದ ಯಾದವ್, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಒಂದು ಅಥವಾ ಎರಡು ಸ್ಥಾನಗಳನ್ನು ಗೆದ್ದರೆ ಅದೇ ಹೆಚ್ಚು.ಈ ಬಾರಿ ಹಿಂದುಳಿದ ವರ್ಗಗಳ ಸಮಸ್ಯೆ, ನಿರುದ್ಯೋಗ, ರೈತರ ಸಮಸ್ಯೆ, ಗಲಭೆಗಳು ಪ್ರಮುಖ ಚರ್ಚಾ ವಿಷಯಗಳಾಗಿವೆ ಎಂದಿದ್ದಾರೆ.