ಯುಪಿಎಸ್ಸಿ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ; ವಯೋಮಿತಿ ಇಳಿಕೆ ಕೇವಲ ವದಂತಿ ಎಂದ ಕೇಂದ್ರ ಸರ್ಕಾರ
ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಗರಿಷ್ಠ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವ ಯಾವುದೇ ಚಿಂತನೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನವದೆಹಲಿ: ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಗರಿಷ್ಠ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವ ಯಾವುದೇ ಚಿಂತನೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಯುಪಿಎಸ್ಸಿ ಪರೀಕ್ಷಾರ್ಥಿಗಳ ವಯಸ್ಸಿನ ಮಿತಿ 32 ವರ್ಷ ಇದೆ. ಅದನ್ನು 27ಕ್ಕೆ ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, "ಇದು ಕೇವಲ ವದಂತಿ ಅಷ್ಟೇ; ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಸಾಮನ್ಯವರ್ಗದವರಿಗೆ 32 ವರ್ಷಗಳು ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 37 ವರ್ಷಗಳ ಗರಿಷ್ಠ ಮಿತಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.
ನೀತಿ ಆಯೋಗವು 'Strategy for New India @75' ವರದಿಯಲ್ಲಿ ವಯೋಮಿತಿಯನ್ನು 27 ವರ್ಷಗಳಿಗೆ ಇಳಿಸಲು ಶಿಫಾರಸು ಮಾಡಿದೆ. ಇದಲ್ಲದೆ, ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ ಹೊರತುಪಡಿಸಿ, ಮೂಲಭೂತ ಶಿಕ್ಷಣದಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕು, ಎಲ್ಲಾ ನಾಗರಿಕ ಸೇವೆಗಳಿಗೆ ಕೇವಲ ಒಂದು ಪರೀಕ್ಷೆಯನ್ನು ಮಾತ್ರ ನಡೆಸಬೇಕು. ಭಾರತಿಯ ನಾಗರಿಕ ಸೇವೆಯಡಿ ಕಾರ್ಯನಿರ್ವಹಿಸಿರುವ ಪ್ರತಿಯೊಬ್ಬ ಅಧಿಕಾರಿಗೂ ಕಡ್ದಾಯ ನಿವೃತ್ತಿ ನಿಯಮ ಜಾರಿಗೊಳಿಸಬೇಕೆಂದು ಶಿಫಾರಸು ಮಾಡಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.