ನವದೆಹಲಿ : 2014 ರಲ್ಲಿ ಕಾಣೆಯಾಗಿದ್ದ  39 ಭಾರತೀಯರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವರನ್ನು ಪತ್ತೆಹಚ್ಚಲು ಮಾಡಿದ ಯಾವುದೇ ಪ್ರಯತ್ನಗಳೂ ಫಲಿಸಲಿಲ್ಲ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, ವಿದೇಶಾಂಗ ಸಚಿವಾಲಯ, ಅದರಲ್ಲೂ ವಿಶೇಷವಾಗಿ ನನ್ನ ಸಹೋದ್ಯೋಗಿಗಳಾದ  ಸುಷ್ಮಾ ಸ್ವರಾಜ್ ಮತ್ತು ಜನರಲ್ ವಿ.ಕೆ.ಸಿಂಗ್  ಅವರು ಮೊಸುಲ್ನಲ್ಲಿ ಕಾಣೆಯಾದವರನ್ನು ಪತ್ತೆಹಚ್ಚಲು ಮತ್ತು ಸುರಕ್ಷಿತವಾಗಿ ಮರಳಿ ತರಲು ಬಹಳಷ್ಟು ಪ್ರಯತ್ನಿಸಿದರೂ ಫಲಿಸಲಿಲ್ಲ" ಎಂದಿದ್ದಾರೆ.



"ಮೊಸುಲ್ನಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬ ಭಾರತೀಯನಿಗೂ ದುಃಖವಾಗಿದೆ. ನಾವು ಮೃತರ ಕುಟುಂಬಗಳೊಂದಿಗೆ ಒಗ್ಗೂಡಿ, ಮೊಸುಲ್ನಲ್ಲಿ ಕೊಲ್ಲಲ್ಪಟ್ಟ ಭಾರತೀಯರಿಗೆ ನಮ್ಮ ಗೌರವಗಳನ್ನು ಸಲ್ಲಿಸುತ್ತೇವೆ" ಎಂದು ಅವರು ಹೇಳಿದ್ದಾರೆ.



ಇರಾಕಿನ ಮೊಸುಲ್'ನಲ್ಲಿ 2014 ರಿಂದ ಕಾಣೆಯಾಗಿದ್ದ 39 ಭಾರತೀಯರು ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ರಾಜ್ಯಸಭೆಯಲ್ಲಿ ಘೋಷಿಸಿದ್ದರು. 


ಮೃತ ದೇಹದ ಅವಶೇಷಗಳನ್ನು ಬಾಗ್ದಾದ್'ಗೆ ಕಳುಹಿಸಲಾಗಿತ್ತು. ಅಲ್ಲದೆ, ದೇಹಗಳ ಪರಿಶೀಲನೆಗೆ, ಅವರ ಸಂಬಂಧಿಕರ ಡಿಎನ್ಎ ಮಾದರಿಗಳನ್ನು ಕಳುಹಿಸಲಾಗಿತ್ತು. ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳು ಇದರಲ್ಲಿ ಭಾಗಿಯಾಗಿದ್ದವು. 


2014ರಲ್ಲಿ ಅಪಹರಣಕ್ಕೊಳಗಾದ 40 ಜನರಲ್ಲಿ ಒಬ್ಬರು ತಪ್ಪಿಸಿಕೊಂಡಿದ್ದು, ಉಳಿದ 39 ಮಂದಿಯಲ್ಲಿ ಮಣ್ಣುಮಾಡಲಾಗಿದ್ದ 38 ಮೃತದೇಹಗಳ ಡಿಎನ್ಎ ಮಾದರಿಗಳು ಸಂಪೂರ್ಣ ಹೊಂದಾಣಿಕೆಯಾಗಿದ್ದು, 39ನೇ ಮೃತ ದೇಹದ ಡಿಎನ್ಎ ಶೇ.70 ಹೊಂದಾಣಿಕೆಯಾಗಿದೆ. ಇವರನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹತ್ಯೆಗೈದಿರುವುದಾಗಿ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದರು.