ನವದೆಹಲಿ: ಭಾರತೀಯ ವಾಯುಸೇನೆ ಬಾಲಾಕೋಟ್‌ನಲ್ಲಿ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ನಡೆಸಿದ ವಾಯು ದಾಳಿಯನ್ನು ಯಾರೂ ಕೂಡ ಚುನಾವಣೆ ಜೊತೆಗೆ ಹೋಲಿಕೆ ಮಾಡಬಾರದು ಅಥವಾ ಯಾರೂ ಇದರ ರಾಜಕೀಯ ಪ್ರಯೋಜನ/ಕ್ರೆಡಿಟ್ ತೆಗೆದುಕೊಳ್ಳಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಜಲ ಸಂಪನ್ಮೂಲ ಸಚಿವರೂ ಆಗಿರುವ ನಿತಿನ್ ಗಡ್ಕರಿ, ತಾವು ಯಾವುದೇ ಹುದ್ದೆಯ ಸ್ಪರ್ಧಿಯಲ್ಲ ಮತ್ತು ನಾನು ಪ್ರಧಾನಿ ಪದವಿಯ ರೇಸ್ ನಲ್ಲಿಯೂ ಇಲ್ಲ ಎಂದು ಇದೇ ವೇಳೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನರೇಂದ್ರ ಮೋದಿ ಅವರು ಜನಾದೇಶದಂತೆ ಮತ್ತೆ ಪ್ರಧಾನ ಮಂತ್ರಿಯಾಗಿ ಹಿಂದಿರುಗುವರು. 2014 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅವರು ಬೃಹತ್ ಮಟ್ಟದಲ್ಲಿ ಗೆದ್ದು ಬರುವರು ಎಂದು ಗಡ್ಕರಿ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.


"ಪಾಕಿಸ್ತಾನದ ವಿರುದ್ಧದ ವಾಯುದಾಳಿಯನ್ನು ಚುನಾವಣೆಗೆ ಸಂಬಂಧಿಸಬಾರದು, ಅದನ್ನು ಚುನಾವಣಾ ವಿಚಾರವಾಗಿಯೂ ಮಾಡಬಾರದು ಅಥವಾ ಯಾರೂ ಕೂಡ ಇದರ ಕ್ರೆಡಿಟ್ ತೆಗೆದುಕೊಳ್ಳಬಾರದು" ಎಂದು ಗಡ್ಕರಿ ಪುನರುಚ್ಚರಿಸಿದರು. ಇದೇ ವೇಳೆ ವಿರೋಧ ಪಕ್ಷಗಳು ಈ ಬಗ್ಗೆ ಯಾವುದೇ ಅನುಮಾನ ಹೊಂದಿದ್ದರೆ, ಅದು ಅವರ ಸಮಸ್ಯೆಯಾಗಿದೆ. ಆದರೆ ಈ ಬಗ್ಗೆ ರಾಜಕೀಯ ಮಾಡದಂತೆ ನಾನು ವಿರೋಧ ಪಕ್ಷದವರಲ್ಲಿ ವಿನಂತಿಸುತ್ತೇನೆ ಎಂದು ಅವರು ತಿಳಿಸಿದರು.


ಚುನಾವಣಾ ಪ್ರಚಾರದ ವೇಳೆ ಆಡಳಿತಾರೂಢ ಪಕ್ಷ ಏಕೆ ಇದನ್ನು ಬಳಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, "ಭದ್ರತೆ ನಮಗೆ ಪ್ರಮುಖವಾದುದು. ಇದನ್ನು ರಾಜಕೀಯಗೊಳಿಸಬಾರದು. ಭಾರತದಲ್ಲಿ ಯಾರಾದರೂ ನಮ್ಮ ಸೈನಿಕರ ಹುತಾತ್ಮತೆಯನ್ನು ಅನುಮಾನಿಸಿದರೆ, ಯಾರಾದರೂ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡಿದರೆ ಅದು ದೇಶದ ಎಲ್ಲ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ ಒಮ್ಮತದ ಧ್ವನಿಯಲ್ಲಿ ಮಾತನಾಡಬೇಕು. ಇಂತಹವುಗಳ ಕುರಿತು ಯಾವುದೇ ರಾಜಕೀಯ ಇರಬಾರದು" ಎಂದರು.