ನೋಯ್ಡಾ: 14 ಸ್ಪಾಗಳ ಮೇಲೆ ರೇಡ್, ವಿದೇಶಿ ಪ್ರಜೆಗಳ ಬಂಧನ
ದಾಳಿ ವೇಳೆ ಕನಿಷ್ಠ 25 ಮಹಿಳೆಯರು ಮತ್ತು 10 ಪುರುಷರನ್ನು ಬಂಧಿಸಲಾಗಿದ್ದು, ಒಂದು ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೋಯ್ಡಾದ ವಿವಿಧ ಸ್ಪಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು 35 ಜನರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಕನಿಷ್ಠ 25 ಮಹಿಳೆಯರು ಮತ್ತು 10 ಪುರುಷರನ್ನು ಬಂಧಿಸಲಾಗಿದ್ದು, ಒಂದು ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಗೌತಮ್ ಬುದ್ಧ ನಗರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್, ಉತ್ತರ ಪ್ರದೇಶದ ಪೊಲೀಸರ 14 ತಂಡಗಳು ಜಿಲ್ಲಾದ್ಯಂತ ಅನೇಕ ಸ್ಪಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
ದಾಳಿಯ ವೇಳೆ ಎಲ್ಲಾ ಸ್ಪಾ ಕೇಂದ್ರಗಳಿಗೆ ಮೊಹರು(sealed ) ಹಾಕಲಾಗಿದೆ ಎಂದು ತಿಳಿಸಿದ ಅವರು, ಅವುಗಳಲ್ಲಿ ಮೂರು ಸ್ಪಾ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ಬಳಸಲಾಗುತ್ತಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ದಂಧೆಯಲ್ಲಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಭಾನುವಾರ ರಾತ್ರಿ ನಡೆಸಲಾದ ದಾಳಿ ವೇಳೆ ಒಂದು ಲಕ್ಷ ರೂಪಾಯಿ ಮೌಲ್ಯದ ನಗದು ಮಾತ್ರವಲ್ಲದೆ, ಬಳಸಿದ ಮತ್ತು ಬಳಕೆಯಾಗದ ಕಾಂಡೋಮ್, ಬಿಯರ್ ಕ್ಯಾನ್ ಮತ್ತು ಇತರ ಆಕ್ಷೇಪಾರ್ಹ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳು ಥೈಲ್ಯಾಂಡ್ ಮೂಲದ ಕೆಲವರು ಸೇರಿದಂತೆ ವಿದೇಶಿ ಪ್ರಜೆಗಳನ್ನೂ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಏಳು ಸರ್ಕಲ್ ಅಧಿಕಾರಿಗಳು, ಎಂಟು ಸ್ಟೇಷನ್ ಹೌಸ್ ಅಧಿಕಾರಿಗಳು, 30 ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಪುರುಷ ಮತ್ತು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡ ಹದಿನಾಲ್ಕು ಪೊಲೀಸರ ತಂಡಗಳು ಈ ಕ್ರಮ ಕೈಗೊಂಡಿವೆ. ಸ್ಪಾ ಕೇಂದ್ರಗಳ ಮಾಲೀಕರ ವಿರುದ್ಧ ದರೋಡೆಕೋರರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.